ಮಡಿಕೇರಿ, ಜು.೧೯: ಕೋವಿಡ್ ಸೋಂಕು ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿರುವ ಲಸಿಕಾ ಕೇಂದ್ರದಲ್ಲೂ ಇದೀಗ ಕೋವಿಡ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿಯೂ ಪರೀಕ್ಷೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಕೋವಿಡ್ ಲಕ್ಷಣಗಳು ಕಂಡು ಬಂದರೆ, ಹೊರ ಜಿಲ್ಲೆಯಿಂದ ಬರುವವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತದೆ. ಪಾಸಿಟಿವ್ ಕಂಡುಬAದಲ್ಲಿ ಅಂತವರಲ್ಲಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗುವದು. ಉಳಿದವರನ್ನು ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲಾಗುವದು. ಕೋವಿಡ್ ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಕೊರತೆಯ ನಡುವೆಯೂ ಜನರು ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ.
ಈ ನಡುವೆ ಇದೀಗ ಲಸಿಕಾ ಕೇಂದ್ರದಲ್ಲೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಮೊದಲ ಲಸಿಕೆ ಪಡೆಯುವವರಿಗೆ ಪರೀಕ್ಷೆ ಮಾಡಿಸಿ ನಂತರ ಲಸಿಕೆ ನೀಡಲಾಗುತ್ತಿದೆ. ಆದರೆ, ಲಸಿಕೆ ಪಡೆದ ಬಳಿಕ ಪಾಸಿಟಿವ್ ವರದಿ ಬಂದರೆ ಹೇಗೇ ಎಂಬ ಕಳವಳ ಲಸಿಕೆ ಪಡೆದುಕೊಳ್ಳಲು ಬರುವವರದ್ದಾಗಿದೆ.