ಮಡಿಕೇರಿ, ಜು. ೧೯: ಮಡಿಕೇರಿ ತಾಲೂಕಿನ ಆವಂದೂರು ಗ್ರಾಮದ ವಿಶೇಷಚೇತನ ವೃದ್ಧ ಬೊಮ್ಮೆಗೌಡನ ಚಿನ್ನಪ್ಪ(ಬಾಬಿ) ಅವರು ಜುಲೈ, ೧೫ ರಂದು ಕಿರುಹೊಳೆ ದಾಟುವ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಾವನ್ನಪ್ಪಿದ್ದು ಈ ಹಿನ್ನೆಲೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಚಿನ್ನಪ್ಪ ಅವರ ಪತ್ನಿ ಹೇಮಾವತಿ ಅವರಿಗೆ ೫ ಲಕ್ಷ ರೂ. ಗಳ ಚೆಕ್ ಹಸ್ತಾಂತರಿಸಿದರು.

ಮಳೆಗಾಲದಲ್ಲಿ ಬೆಟ್ಟ ಗುಡ್ಡದ ತಪ್ಪಲಿನಲ್ಲಿ ಹಾಗೂ ನದಿ ತೀರದಲ್ಲಿ ವಾಸಿಸುವ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು. ಮಳೆ ಹೆಚ್ಚಾದಲ್ಲಿ ಬೆಟ್ಟ ಕುಸಿಯುವ ಮತ್ತು ನದಿ ತನ್ನ ದಿಕ್ಕನ್ನು ಬದಲಿಸುವ ಸಾಧ್ಯತೆಗಳೇ ಹೆಚ್ಚಾಗಿರುವ ಕಾರಣ ಜಿಲ್ಲಾಡಳಿತದ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಬೇಕು. ನೆರೆ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ತಾತ್ಕಾಲಿಕ ಆಶ್ರಯ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಬೆಪ್ಪುರನ ಮೇದಪ್ಪ, ತಹಶೀಲ್ದಾರರಾದ ಮಹೇಶ್, ಅವಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ ಹಾಗೂ ಇತರರು ಇದ್ದರು.