ಕಣಿವೆ, ಜು. ೧೯: ಎರಡು ತಿಂಗಳ ದೀರ್ಘಕಾಲದ ಕೊರೊನಾ ಲಾಕ್‌ಡೌನ್ ಸಮಯವನ್ನು ಇಲ್ಲಿನ ವಿವಿಧ ಬಡಾವಣೆಗಳ ನಿವಾಸಿಗಳು ಜೇಬಿನಿಂದ ಹಣ ಹಾಕಿ ಉದ್ಯಾನವನದ ಸದುದ್ದೇಶಕ್ಕೆ ಬಳಸಿಕೊಂಡಿದ್ದಾರೆ.
ಕುಶಾಲನಗರದ ಆರ್‌ಕೆ ಬಡಾವಣೆ, ಆರ್‌ಸಿ ಬಡಾವಣೆ ಹಾಗೂ ಗುಂಡೂರಾವ್ ಬಡಾವಣೆಗಳ ನೂರಾರು ನಿವಾಸಿಗಳನ್ನು ಒಗ್ಗೂಡಿಸಿ ಎರಡು ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ ಈ ಬಡಾವಣೆಗಳ ಹೃದಯಭಾಗದಲ್ಲಿ ಕಾಡುಗಿಡಗಳು ಬೆಳೆದು ನೋಡಲು ವಿರೂಪವಾಗಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿಯು ಉದ್ಯಾನವನಕ್ಕೆ ಎಂದು ಕಾಯ್ದಿರಿಸಿರುವ ಒಂದೂವರೆ ಎಕರೆಯಷ್ಟು ವಿಶಾಲವಾದ ಜಾಗಕ್ಕೆ ಸುಂದರವಾದ ರೂಪ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಬಡಾವಣೆಯ ಕೆಲವೊಂದು ಸಹೃದಯಿ ನಿವಾಸಿಗಳೇ ಸೇರಿ ಸಂಗ್ರಹಿಸಿದ ಎರಡು ಲಕ್ಷಕ್ಕೂ ಹೆಚ್ಚಿನ ಹಣವನ್ನು ಇಲ್ಲಿ ಸುಂದರವಾದ ಉದ್ಯಾನವನ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಈ ಜಾಗದ ಸುತ್ತಲೂ ೧೧೦ ಕಲ್ಲು ಕಂಬಗಳನ್ನು ತಂದು ನೆಟ್ಟು ಅವುಗಳಿಗೆ ವಿವಿಧ ಬಣ್ಣಗಳನ್ನು ಲೇಪಿಸಿ ಚೆಂದ ಕಾಣಿಸಿದ್ದಾರೆ. ಬೀಡಾಡಿ ದನಗಳು ಒಳನುಸುಳದಂತೆ ತಂತಿ ಬೇಲಿಯನ್ನು ಅಳವಡಿಸಿದ್ದಾರೆ. ಉದ್ದೇಶಿತ ಉದ್ಯಾನವನದೊಳಗೆ ಅಲ್ಲಲ್ಲಿ ಸಿಮೆಂಟಿನಿAದ ನಿರ್ಮಿತ ಕಲ್ಲು ಬೆಂಚುಗಳ ಆಸನಗಳನ್ನು ಹಾಕಿರುವುದರಿಂದ ಇಳಿಹೊತ್ತಿನಲ್ಲಿ ಬಡಾವಣೆಯ ಕೆಲವು ಇಳಿವಯಸ್ಸಿನ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಇಲ್ಲಿ ಆಸನಗಳಲ್ಲಿ ವಿರಮಿಸುತ್ತಿದ್ದಾರೆ. ಹಾಗೆಯೇ ವಿಶಾಲ ವ್ಯಾಪ್ತಿಯ ಉದ್ಯಾನವನಕ್ಕೆ ಪ್ರವೇಶ ಕಲ್ಪಿಸುವ ಜಾಗದಲ್ಲಿ ಕಬ್ಬಿಣದ ಗೇಟನ್ನು ಅಳವಡಿಸಲಾಗಿದೆ.
ವಿಶೇಷ ಎಂದರೆ ಸುಂದರ ಪರಿಸರದಲ್ಲಿ ರೂಪು ತಳೆದಿರುವ ಈ ಉದ್ದೇಶಿತ ಉದ್ಯಾನದ ಸುತ್ತಲೂ ಪರಿಸರ ಸ್ನೇಹಿಯಾದಂತಹ ನೂರಾರು ಬಗೆ ಬಗೆಯ ಗಿಡಗಳನ್ನು ಪ್ರತೀ ಮನೆ ಮನೆಯವರು ಕೂಡ ನೆಡುವ ಮೂಲಕ ಪರಿಸರ ದಿನವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಿರುವ ಇಲ್ಲಿನ ವಾಸಿಗಳು ಆ ಗಿಡಗಳಿಗೆಲ್ಲಾ ರಕ್ಷಾ ಕವಚಗಳನ್ನು ಅಳವಡಿಸಿ ಆರೈಕೆ ಮಾಡುತ್ತಿದ್ದಾರೆ.
ಈ ಉದ್ಯಾನದ ಪ್ರವೇಶ ದ್ವಾರದ ಹೊರಭಾಗದ ಸಾರ್ವಜನಿಕ ರಸ್ತೆಯಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತಿರುವ ಆಲ ಮತ್ತು ಅರಳಿ ಎಂಬ ಎರಡು ದೇವರ ಮರಗಳಿದ್ದು ಈ ಮರಗಳ ಸುತ್ತಲೂ ಕಟ್ಟೆಗಳನ್ನು ಕಟ್ಟಿ ಪೂಜನೀಯ ಗೊಳಿಸುವ ಬಗ್ಗೆ ಇಲ್ಲಿನ ಸಮಾನ ಮನಸ್ಕರು ಹೇಳುತ್ತಾರೆ.
ಕುಶಾಲನಗರದಲ್ಲಿರುವ ೫೦ಕ್ಕೂ ಹೆಚ್ಚಿನ ವಿವಿಧ ಬಡಾವಣೆಗಳ ಪೈಕಿ ಸ್ವಚ್ಛ ಹಾಗೂ ಸುಂದರ ಪರಿಸರದಲ್ಲಿರುವ ಈ ಮೂರು ಬಡಾವಣೆಗಳ ನಿವಾಸಿಗಳು ರೂಪಿಸಲು ಹೊರಟಿರುವ ಉದ್ದೇಶಿತ ಉದ್ಯಾನವನದ ಯೋಜನೆ ಹಾಗೂ ಯೋಚನೆಗಳು ಇಡೀ ಊರಿಗೆ ಮಾದರಿಯಾಗಿವೆ.
ಈ ಮೂರು ಬಡಾವಣೆಗಳಲ್ಲಿ ಹಿಂದೂ, ಮುಸಲ್ಮಾನ ಹಾಗೂ ಕ್ರೆöÊಸ್ತ ಬಂಧುಗಳು ಸಮ್ಮಿಶ್ರವಾಗಿದ್ದು ಸೌಹಾರ್ದತೆಯನ್ನು ಸಾರುತ್ತಿದ್ದಾರೆ. ಅಂದರೆ ರಾಷ್ಟಿçÃಯ ಹಬ್ಬಗಳು, ನಾಡÀ ಹಬ್ಬ, ಊರ ಹಬ್ಬ ಹಾಗೂ ಆಯಾಯ ಧರ್ಮಗಳ ಆಚರಣೆಗಳನ್ನು ಆಗಸ್ಟ್ ೧೫ರ ಸ್ವಾತಂತ್ರ‍್ಯ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಈ ಉದ್ಯಾನದ ಜಾಗದಲ್ಲಿಯೇ ಚಾಲನೆ ಕೊಡಲಿದ್ದೇವೆ ಎಂದು ಇಲ್ಲಿನ ಸಮಾನ ಮನಸ್ಕರಾದ ಉದ್ಯಮಿಗಳಾದ ಕೆ.ಎನ್. ನಾಗೇಂದ್ರ, ಹಮೀದ್ ಹಾಗೂ ಸಂದೀಪ್ ಹೇಳುತ್ತಾರೆ. ಬಡಾವಣೆಯಿಂದ ಚುನಾಯಿತರಾಗಿರುವ ಪಟ್ಟಣ ಪಂಚಾಯಿತಿ ಸದಸ್ಯ ದಿನೇಶ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅವರನ್ನು ಗೌರವಿಸಿ ಸನ್ಮಾನಿಸಲು ನಮ್ಮ ಬಡಾವಣೆಗೆ ಆಹ್ವಾನಿಸಿದ ಸಂದರ್ಭ ಇಲ್ಲಿ ಬೆಳೆದಿರುವ ಕಾಡುಗಿಡಗಳನ್ನು ತೆರವುಗೊಳಿಸಿ ಉದ್ಯಾನ ಮಾಡಿಕೊಡಿ ಎಂಬ ಬೇಡಿಕೆ ಇಟ್ಟೆವು. ಆದರೆ ಕೋವಿಡ್ ಕಾರಣದಿಂದ ಪಂಚಾಯಿತಿಗೆ ಯಾವುದೇ ಅನುದಾನಗಳು ಬರುತ್ತಿಲ್ಲ ಎಂದು ಚುನಾಯಿತರು ಹೇಳಿದ್ದರು. ಬಳಿಕ ಕಾಡು ಬೆಳೆದಿದ್ದ ಉದ್ಯಾನದ ಜಾಗವನ್ನು ಬಡಾವಣೆಯ ನಿವಾಸಿಗಳೇ ಸೇರಿ ಹಣ ಹಾಕಿ ಈ ಹಂತಕ್ಕೆ ತಂದಿದ್ದೇವೆ ಎಂದು ಇಲ್ಲಿನ ನಿವಾಸಿ ರಾಮರಾವ್ ಸಿಂಧೆ ಹೇಳುತ್ತಾರೆ. ಪಂಚಾಯಿತಿ ಅಧ್ಯಕ್ಷರಾದ ಜಯವರ್ಧನ, ನಮ್ಮ ಸದಸ್ಯರಾದ ದಿನೇಶ್ ಅವರ ಸಹಕಾರದಿಂದ ನಮ್ಮ ಉದ್ಯಾನವನ ಮುಂದಿನ ದಿನಗಳಲ್ಲಿ ಊರಿನ ಪ್ರಮುಖ ಆಕರ್ಷಣೆ ಆಗಲಿದೆ.
ಸಮಾನಮನಸ್ಕರಾದ ನಮ್ಮ ಬಡಾವಣೆಯ ಒಗ್ಗಟ್ಟಿನ ಕಾರ್ಯಗಳನ್ನು ನೋಡಿ ಆಸುಪಾಸಿನ ವಿವಿಧ ಬಡಾವಣೆಗಳ ಮಂದಿ ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬರುತ್ತಿದ್ದಾರೆ ಎಂದು ಇಲ್ಲಿನ ಮತ್ತೋರ್ವ ನಿವಾಸಿ ವಕೀಲ ಜಗದೀಶ್ ಹಾಗೂ ಪಿಡಿಓ ರಾಕೇಶ್ ಹೇಳುತ್ತಾರೆ.
ಒಟ್ಟಾರೆ ಏನೇ ಇರಲಿ ಈಗಾಗಲೇ ಅಧಿಕೃತವಾಗಿ ತಾಲೂಕು ಕೇಂದ್ರವಾಗಿರುವ ಕುಶಾಲನಗರದ ಪ್ರತೀ ಬಡಾವಣೆಗಳಿಗೂ ಈ ನಿವಾಸಿಗಳ ಧ್ಯೇಯಗಳು ಅನುಕರಣೀಯವಾಗಬೇಕಿದೆ. ಎಲ್ಲವನ್ನು ಮಾಡಿಕೊಡಿ ಎಂದು ಅಂಗಲಾಚುವ ಬದಲು ನಾವಿಷ್ಟು ಮಾಡಿದ್ದೇವೆ. ಉಳಿದಷ್ಟು ನೀವು ಮಾಡಿ ಎಂದು ಕೇಳಿದರೆ, ಶಾಸಕರು ಹಾಗೂ ಸಂಸದರ ಅನುದಾನ ಗಳನ್ನು ಇಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ. ಈ ಬಡಾವಣೆಯ ನಿವಾಸಿಗಳ ಒಗ್ಗಟ್ಟಿನ ಸೇವಾ ಕಾರ್ಯ ಗಳಿಗೆ ಶುಭವಾಗಲಿ.
-ಕೆ. ಎಸ್. ಮೂರ್ತಿ, ಕುಶಾಲನಗರ.