ಕುಶಾಲನಗರ, ಜು.೧೭: ಕೊಡಗು ಜಿಲ್ಲೆಯಲ್ಲಿ ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ಆನೆಗಳ ಚಲನ ವಲನಗಳನ್ನು ಗಮನಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಶೇಷ ಯೋಜನೆ ಯೊಂದನ್ನು ರೂಪಿಸಿದ್ದು, ಜಿಲ್ಲೆಯ ಕೆಲವೆಡೆ ಈಗಾಗಲೇ ಯೋಜನೆ ಚಾಲನೆಗೊಂಡಿದೆ. ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಅವುಗಳು ಸಂಚರಿಸುವ ಪ್ರದೇಶದ ಮಾಹಿತಿ ಪಡೆದು ಯಾವುದೇ ಅಪಾಯ ಉಂಟಾಗದAತೆ ಎಚ್ಚರ ವಹಿಸಲು ಈ ಕ್ರಮ ಸಹಕಾರಿಯಾಗಿದೆ.
ಅರಣ್ಯ ಇಲಾಖೆ, ಡೆಹರಡೂನ್ ವೈಲ್ಡ್ಲೈಫ್ ಇನ್ಸಿ÷್ಟಟ್ಯೂಟ್ ಮತ್ತು ಜರ್ಮನಿಯ ಜಿಐಜೆಡ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ವೀರಾಜಪೇಟೆ ವ್ಯಾಪ್ತಿಯ ೩ ಹೆಣ್ಣಾನೆ ಮತ್ತು ಕೊಡಗು ಹಾಗೂ ಹಾಸನ ಜಿಲ್ಲೆ ಗಡಿಭಾಗಗಳ ೩ ಆನೆಗಳು ಸೇರಿದಂತೆ ಇದುವರೆಗೂ ಒಟ್ಟು ೧೩ ಕಾಡಾನೆಗಳಿಗೆ ರೇಡಿಯೋಕಾಲರ್ ಅಳವಡಿಸಲಾಗಿದೆ. ಈ ಮೂಲಕ ಆನೆಗಳ ಹಿಂಡು ದಿನ ರಾತ್ರಿ ಸಂಚರಿಸುವ ಸಂಪೂರ್ಣ ಮಾಹಿತಿಯನ್ನು ಪಡೆಯುವ ಯೋಜನೆ ಈಗ ರಾಜ್ಯಾದಾದ್ಯಂತ ನಡೆದಿದೆ. ರಾಜ್ಯದಲ್ಲಿ ಒಟ್ಟು ೧೩ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಪುಂಡಾನೆಗಳ ಚಲನ ವಲನಗಳನ್ನು ಗಮನಿಸುವ ಕಾರ್ಯಾಚರಣೆ ಅರಣ್ಯ ಇಲಾಖೆಯ ವಿಶೇಷ ಯೋಜನೆ ಚಾಲನೆಗೊಂಡಿದೆ. ಈಗಾಗಲೇ ಕೊಡಗು, ಹಾಸನ ಜಿಲ್ಲೆಗಳಲ್ಲಿ ಈ ಯೋಜನೆ ಕಾರ್ಯಗತಗೊಂಡಿದ್ದು, ಕಾಡಿನಿಂದ ನಾಡಿಗೆ ಲಗ್ಗೆಯಿಡುವ ಕಾಡಾನೆಗಳ ಮಾಹಿತಿ ಪಡೆಯಬಹುದಾಗಿದೆ ಎಂದು ಡೆಹರಾಡೂನ್ ಸಂಸ್ಥೆಯ ತಜ್ಞ ಡಾ. ಸನತ್ ಮುಳಿಯ ಮಾಹಿತಿ ನೀಡಿದ್ದಾರೆ.
ಈ ರೇಡಿಯೋ ಕಾಲರ್ ಯೋಜನೆ ಮೂಲಕ ಪ್ರತೀ ಗಂಟೆಗೊಮ್ಮೆ ಆನೆಗಳ ವ್ಯಾಪ್ತಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಸಾದ್ಯವಾಗುತ್ತಿದೆ. ಪ್ರತಿದಿನ ೨೪ ವ್ಯಾಪ್ತಿಗಳಲ್ಲಿ ಆನೆಯ ಚಲನವಲನ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿರುವ ಡಾ. ಸನತ್ ಈ ಮೂಲಕ ಕಾಡಾನೆಗಳ ದಾಂದಲೆ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದು ಆಯಾ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸಾದ್ಯವಾಗುತ್ತಿದೆ ಎಂದು ಮಾಹಿತಿ ಒದಗಿಸಿದ್ದಾರೆ. ರೇಡಿಯೋ ಕಾಲರ್ ಮೂರು ವರ್ಷಗಳ ಅವಧಿ ಚಾಲ್ತಿಯಲ್ಲಿದ್ದು ನಂತರ ಮತ್ತೆ ಹೊಸ ಕಾಲರ್ ಅಳವಡಿಸಬೇಕಾಗುತ್ತದೆ. ಮಳೆಗಾಲ ಪೂರ್ಣಗೊಂಡ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲಿ ಪುಂಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಮೂಲಕ ಇನ್ನೂ ಹೆಚ್ಚಿನ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಯೋಜನೆ ಸಿದ್ದವಾಗಿದೆ ಎಂದು ಅವರು ತಿಳಿಸಿದ್ದಾರೆ.
ದುಬಾರೆ ಆನೆಗಳ ಪರೀಕ್ಷೆ
ಈ ನಡುವೆ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರತಿಯೊಂದು ಆನೆಗಳ ಆರೋಗ್ಯ ತಪಾಸಣೆ ಕಾರ್ಯ ಕೂಡಾ ನಡೆಯುತ್ತಿದೆ. ಅರಣ್ಯ ಇಲಾಖೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ನೇತೃತ್ವದಲ್ಲಿ ಡೆಹರಡೂನ್ ವೈದ್ಯರ ತಂಡದಿAದ ಆನೆಗಳ ರಕ್ತ ಪಡೆದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಶಿಬಿರದ ೩೧ ಆನೆಗಳಿಗೆ ಟಿಬಿ ಮತ್ತಿತರ ಸಾಂಕ್ರಾಮಿಕ ರೋಗಗಳ ಪತ್ತೆಗಾಗಿ ಈ ತಪಾಸಣೆ ೩ ತಿಂಗಳಿಗೊಮ್ಮೆ ನಡೆಯುತ್ತಿದೆ ಎಂದು ಅರಣ್ಯ ವಲಯಾಧಿಕಾರಿ ಅನನ್ಯ ಕುಮಾರ್ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಹಿರಿಯ ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ವೈದ್ಯರ ತಂಡದಲ್ಲಿ ಡಾ. ಸನತ್ ಮುಳಿಯ, ಜರ್ಮನಿ ಸಂಸ್ಥೆಯ ಡಾ. ನವನೀತ್, ಡಾ. ತಮ್ಮಯ್ಯ, ದುಬಾರೆ ಸಾಕಾನೆ ಶಿಬಿರದ ಉಸ್ತುವಾರಿ ಅಧಿಕಾರಿ ಮತ್ತು ಉಪ ವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಮತ್ತು ಸಿಬ್ಬಂದಿಗಳು ಶಿಬಿರದ ಒಟ್ಟು ೩೧ ಆನೆಗಳ ಆರೋಗ್ಯ ತಪಾಸಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ದುಬಾರೆ ಶಿಬಿರದಿಂದ ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸಿದ ಕುಶ ಆನೆ ಇದೀಗ ಅರಣ್ಯದಲ್ಲಿ ಆರೋಗ್ಯವಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಮಾಹಿತಿ ನೀಡಿದ್ದು ಕುಶ ಆನೆಗೂ ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
-ವರದಿ: ಚಂದ್ರಮೋಹನ್