ಕೂಡಿಗೆ, ಜು. ೧೭: ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಹಾರಂಗಿ ಅಣೆಕಟ್ಟೆಯ ಮುಂಭಾಗದ ಉದ್ಯಾನವನ ಮತ್ತು ಸಮೀಪದಲ್ಲಿರುವ ಸಂಗೀತ ಕಾರಂಜಿ ವೀಕ್ಷಣೆಗೆ ಕಳೆದ ಎರಡು ದಿನಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆ ಮತ್ತು ಲಾಕ್‌ಡೌನ್ ಸಡಿಲಿಕೆೆ ಆಗಿರುವ ಕಾರಣ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡಿ ಅಣೆಕಟ್ಟೆಯ ನಾಲ್ಕು ಕ್ರೆಸ್ಟ್ ಗೇಟ್‌ಗಳ ಮೂಲಕ ಹೊರ ಬರುವ ನೀರಿನ ದೃಶ್ಯ ಮತ್ತು ಬೃಂದಾವನ ವೀಕ್ಷಣೆಯನ್ನು ನೋಡಲು ಪ್ರವಾಸಿಗರ ದಂಡು ಬರುತ್ತಿದೆ.
ಕೊರೊನಾ ನಿಯಮಾನುಸಾರ ವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ಬರುವ ಪ್ರವಾಸಿಗರಿಗೆ ಅಣೆಕಟ್ಟೆಯಲ್ಲಿ ತಪಾಸಣೆಯ ನಂತರ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಅಣೆಕಟ್ಟೆಯ ಭದ್ರತೆ ಹಿತದೃಷ್ಟಿಯಿಂದ ಅಣೆಕಟ್ಟೆಯ ಭದ್ರತೆಯನ್ನು ನಿರ್ವಹಣೆ ಮಾಡುತ್ತಿರುವ ಕರ್ನಾಟಕ ರಾಜ್ಯ ಪೊಲೀಸ್ ಅಂತರಿಕ ವಿಭಾಗದ ಕರ್ನಾಟಕ ಕೈಗಾರಿಕಾ ಪೊಲೀಸ್ ಭದ್ರತಾ ಪಡೆಯ ಸಿಬ್ಬಂದಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸಿ ನಂತರ ಇಲಾಖೆಯ ನಿಯಮದಂತೆ ಒಳಗಡೆಗೆ ಅವಕಾಶವನ್ನು ಕಲ್ಪಿಸುತ್ತಿದ್ದಾರೆ.