ಪೊನ್ನAಪೇಟೆ, ಜು.೧೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧ನೇ ವಿಭಾಗಕ್ಕೆ ಒಳಪಡುವ ಕುಂದ ರಸ್ತೆಯ ಬದಿಯಲ್ಲಿ ಲೋಕೋಪಯೋಗಿ ಇಲಾಖೆ ವಿದ್ಯುತ್ ಕಂಬದ ಬುಡದಲ್ಲಿಯೇ ಚರಂಡಿ ತೆಗೆದಿದ್ದ ಕಾರಣ, ಮಣ್ಣು ಸಡಿಲಗೊಂಡು ಬೀಳುವ ಹಂತದಲ್ಲಿದ್ದ ನಾಲ್ಕು ವಿದ್ಯುತ್ ಕಂಬಗಳನ್ನು, ಹಾಗೂ ಟ್ರಾನ್ಸ್ ಫಾರಂ ಅನ್ನು ಚೆಸ್ಕಾಂ ಸಿಬ್ಬಂದಿ ಸರಿಪಡಿಸಿದರು. ಗೋಣಿಕೊಪ್ಪಲು ಚೆಸ್ಕಾಂ ಇಂಜಿನಿಯರ್ ಕೃಷ್ಣ ಕುಮಾರ್ ನೇತೃತ್ವದಲ್ಲಿ ಸುಮಾರು ೨೦ ಸಿಬ್ಬಂದಿಗಳ ತಂಡ ೮ ಗಂಟೆಗಳ ಕಾಲ ಸತತವಾಗಿ ಕಾರ್ಯನಿರ್ವಹಿಸಿ ಎರಡು ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದ ಪೊನ್ನಂಪೇಟೆಯ ಕಾವೇರಿ ನಗರ, ಕಾಟ್ರಕೊಲ್ಲಿ, ಅರಣ್ಯ ಮಹಾವಿದ್ಯಾಲಯ ಹಾಗೂ ಹಳ್ಳಿಗಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭ ಪೊನ್ನಂಪೇಟೆ ಗ್ರಾ.ಪಂ.ನ ೧ನೇ ವಿಭಾಗದ ಸದಸ್ಯರಾದ ಆಲಿರ ರಶೀದ್, ರಾಮ ಕೃಷ್ಣ ಸ್ಥಳದಲ್ಲೇ ಇದ್ದು ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸಿದರು. ಪಿ ಡಿ ಓ ಪುಟ್ಟರಾಜು, ಗ್ರಾ.ಪಂ ಸದಸ್ಯರಾದ ಮೂಕಳೇರ ಸುಮಿತ, ಅಣ್ಣೀರ ಹರೀಶ್, ನೇತ್ರಾವತಿ ಹಾಜರಿದ್ದರು.

ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿರುವ ಬಗ್ಗೆ ತಾ.೧೫ ರಂದು 'ಶಕ್ತಿ' ಯಲ್ಲಿ ವರದಿ ಪ್ರಕಟವಾಗಿದ್ದನು ಇಲ್ಲಿ ಸ್ಮರಿಸಬಹುದು.