ಹೋರಾಟಗಾರ ಜಿ. ಮಾದೇಗೌಡ ವಿಧಿವಶ

ಮಂಡ್ಯ, ಜು. ೧೭: ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ೯೪ ವರ್ಷ ವಯಸ್ಸಿನ ಜಿ.ಮಾದೇಗೌಡರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. ೧೯೬೨ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ ೬ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. ೧೯೮೯, ೧೯೯೫ರಲ್ಲಿ ೨ ಬಾರಿ ಲೋಕಸಭಾ ಸದಸ್ಯರಾಗಿದ್ದರು. ೧೯೮೦-೮೩ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು. ರಾಜಕಾರಣಿ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇತರೆ ಅನೇಕ ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.

ತಾಂತ್ರಿಕ ಕೋರ್ಸ್ ಆರಂಭಿಸಲು ಎಐಸಿಟಿಇ ಅನುಮತಿ

ಮೈಸೂರು, ಜು. ೧೭: ಕೇಂದ್ರ ಶಿಕ್ಷಣ ಸಚಿವಾಲಯದ ಶಾಸನಬದ್ಧ ಅಂಗವಾದ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ನಿರ್ವಹಣಾ ವಿಭಾಗದಡಿ ಸ್ನಾತಕೋತ್ತರ ವ್ಯವಹಾರ ನಿರ್ವಹಣಾ ಕೋರ್ಸ್ ನಡೆಸಲು (ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟೆçÃಷನ್) ಅನುಮತಿಸಿದೆ. ಮುಕ್ತ ಹಾಗೂ ದೂರಶಿಕ್ಷಣ ಮಾದರಿಯಡಿ ಎಂ.ಬಿ.ಎ. ಕೋರ್ಸ್ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನ್ಯತೆ ಪಡೆದಿರುವ ದೇಶದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ೨೦೨೧-೨೨ನೇ ಸಾಲಿಗೆ ಮುಕ್ತ ಹಾಗೂ ದೂರಶಿಕ್ಷಣ ಕಲಿಕಾ ವಿಧಾನದಡಿ ಎಂ.ಬಿ.ಎ. ಕೋರ್ಸ್ಗೆ (ಜನರಲ್ ಅಡ್ಮಿನಿಸ್ಟೆçÃಷನ್) ೧೦,೦೦೦ ಸೀಟುಗಳಿಗೆ ಪ್ರವೇಶಾತಿ ಕಲ್ಪಿಸಲು ಎಐಸಿಟಿಇ ಅನುಮತಿಸಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ತಾಂತ್ರಿಕ ಕೋರ್ಸ್ ಆರಂಭಿಸಲು ಎಐಸಿಟಿಇ ಅನುಮತಿ ನೀಡಿರುವುದಕ್ಕೆ ಕೆಎಸ್ ಒಯು ಕುಲಪತಿ ವಿದ್ಯಾಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಒಟ್ಟು ೧೮ ಮುಕ್ತ ವಿಶ್ವ ವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಎಐಸಿಟಿಇ ಇಂದ ಮಾನ್ಯತೆ ಪಡೆದ ದೇಶದ ಮೊದಲ ಮುಕ್ತ ವಿವಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.