ಮಡಿಕೇರಿ, ಜು. ೧೭: ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಮತ್ತು ಇನ್ನಿತರ ಕಾರ್ಮಿಕರಿಗೆ ಬಾಕಿ ಉಳಿಸಿರುವ ವೇತನ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಭರತ್ ಒತ್ತಾಯಿಸಿದ್ದಾರೆ. ನಗರದ ಪ್ರತಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಜಿಲ್ಲಾಸ್ಪತ್ರೆ, ವೀರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆ, ಪಾಲಿಬೆಟ್ಟ, ನಾಪೋಕ್ಲು, ಸಿದ್ದಾಪುರ ಹಾಗೂ ಕುಟ್ಟ ಆಸ್ಪತ್ರೆಯಲ್ಲಿ ೩೦೦ಕ್ಕೂ ಅಧಿಕ ಸ್ವಚ್ಛತಾ ಸಿಬ್ಬಂದಿ, ‘ಡಿ’ ಗ್ರೂಪ್, ನಾನ್ ಕ್ಲೀನಿಂಗ್, ಚಾಲಕರು, ಲ್ಯಾಬ್ ಟೆಕ್ನೀಶಿಯನ್, ನರ್ಸ್ಗಳು, ಸೆಕ್ಯೂರಿಟಿ ಇನ್ನಿತರ ನೌಕರರಾಗಿ ಕೆಲಸ ನಿರ್ವ ಹಿಸುತ್ತಿದ್ದಾರೆ. ಸ್ವಚ್ಛತಾ ಸಿಬ್ಬಂದಿಗೆ ಹಾಗೂ ಡಿ ಗ್ರೂಪ್ ನೌಕರರಿಗೆ ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಕನಿಷ್ಟ ವೇತನ ಸಮರ್ಪಕವಾಗಿ ನೀಡುತ್ತಿಲ್ಲ. ಜಿಲ್ಲೆಯ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ವೇತನ ನೀಡುತ್ತಿಲ್ಲ. ಗುತ್ತಿಗೆದಾರರು ತಮ್ಮ ಇಚ್ಛೆಯಂತೆ ವೇತನ ನೀಡುತ್ತಿರುವುದರಿಂದ ಕಾರ್ಮಿಕರ ವೇತನದಲ್ಲಿ ಸಾಕಷ್ಟು ತಾರತಮ್ಯವಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ವೇತನವನ್ನು ಸಮರ್ಪಕ ವಾಗಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುವಂತೆ ಒತ್ತಾಯಿಸಿದರು. ಲಾಕ್‌ಡೌನ್ ಸಂದರ್ಭ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದ ನೌಕರರ ವೇತನವನ್ನು ಕಡಿತಗೊಳಿಸಿರುವುದನ್ನು ಹಿಂತೆಗೆಯ ಬೇಕು. ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸರ್ಕಾರ ರೂ. ೧೦ ಸಾವಿರ ನೀಡುವುದಾಗಿ ಘೋಷಣೆ ಮಾಡಿತ್ತು. ಹಣ ಸಿಗದೆ ಇರುವ ಸಿಬ್ಬಂದಿಗೆ ಕೂಡಲೇ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾನ್ ಕ್ಲೀನಿಂಗ್, ಡಿ ಗ್ರೂಪ್, ಚಾಲಕರು, ಲ್ಯಾಬ್ ಟೆಕ್ನೀಶಿಯನ್, ನರ್ಸ್ಗಳು ಮತ್ತು ಸೆಕ್ಯೂರಿಟಿ ಇನ್ನಿತರೆ ಕಾರ್ಮಿಕರನ್ನು ಗುತ್ತಿಗೆದಾರರಿಂದ ಬಿಡುಗಡೆಗೊಳಿಸಿ ಸರ್ಕಾರ ಇವರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಾನಕಿ, ಉಪಾಧ್ಯಕ್ಷ ನಂಜುAಡ, ಸದಸ್ಯರಾದ ದಿವ್ಯ, ನೇತ್ರ ಹಾಜರಿದ್ದರು.