ಕಣಿವೆ, ಜು. ೧೬: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದಿಂದ ಖಾರೀಫ್ ಬೆಳೆಗೆ ನಾಲೆಗಳಲ್ಲಿ ಶುಕ್ರವಾರದಿಂದಲೇ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ನೀರಾವರಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕುಶಾಲನಗರದ ಪರ್ಪಲ್ ಫಾರ್ಮ್ ವಸತಿ ಧಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ರೈತರ ಗದ್ದೆಗಳಿಗೆ ತಲುಪುವಂತೆ ಸಮರ್ಪಕವಾಗಿ ನಾಲೆಗಳಲ್ಲಿ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಹಾರಂಗಿ ಮಹಾಮಂಡಳದ ವ್ಯಾಪ್ತಿಯಲ್ಲಿ ಬರುವ ಒಟ್ಟು ೧೫೧ ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ಇನ್ನು ಮುಂದೆ ರೈತರಿಂದ ಕರ ವಸೂಲಿ ಮಾಡುವಂತೆಯೂ ಹಾಗೂ ನೀರಾವರಿ ನಿಗಮದ ವತಿಯಿಂದ ನಾಲೆಗಳ ಹೂಳು ತೆಗೆಯಲು ಮತ್ತು ಕಾಡು ಕಡಿಯಲು ಖರ್ಚು ಮಾಡುವ ಅನುದಾನವನ್ನು ಸಂಘಗಳಿಗೆ ನೀಡುವ ಮೂಲಕ ಇನ್ನು ಮುಂದೆ ಸಂಘಗಳೇ ನಾಲೆಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.