ಕಣಿವೆ, ಜು. ೧೬: ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ೨೦೨೧ರ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಕುರಿತು ಕುಶಾಲನಗರದ ಖಾಸಗಿ ವಸತಿ ಧಾಮದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಸಭೆಯ ಆರಂಭದಲ್ಲಿ ಹಾರಂಗಿ ಜಲಾಶಯದ ಮಾಹಿತಿಯನ್ನು ನೀಡುತ್ತಿದ್ದ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ, ೧೩೨ ಕೋಟಿ ಖರ್ಚು ಮಾಡಿ ಏನೇನು ಮಾಡಿದ್ದೀರಾ ? ಏಕೆಂದರೆ ಹಾರಂಗಿ ಜಲಾಶಯದ ಮುಂಬದಿಯಲ್ಲಿ ಅಷ್ಟೊಂದು ವಿಶಾಲವಾದ ಜಾಗ ವಿದ್ದರೂ ಕೂಡ ಇರುವ ಉದ್ಯಾನವನ ಅಭಿವೃದ್ಧಿ ಮಾಡಿಲ್ಲ. ಹೋಗಲಿ ಜಲಾಶಯದ ಆಸುಪಾಸಿನಲ್ಲಿ ಬೆಳೆದು ನಿಂತಿರುವ ಕಾಡನ್ನು ಕಡಿಯಲೂ ಆಗಿಲ್ಲ ಅಂದರೆ ಇನ್ನೇನು ಮಾಡಿದ್ದೀರಾ ? ಎಂದು ಪ್ರಶ್ನಿಸಿದರು.
ಹಾರಂಗಿ ಜಲಾಶಯದ ಸನಿಹವಿರುವ ವಸತಿ ನಿಲಯಗಳು ಹಾಳಾಗಿವೆ. ಏಕೆ ಯಾವ ಅಧಿಕಾರಿಗಳು ಕೂಡ ಇಲ್ಲಿ ವಾಸ್ತವ್ಯ ಇಲ್ಲವೇ ? ಏಕೆ ಇಲ್ಲೇ ವಾಸ್ತವ್ಯ ಇದ್ದರೆ ನಿಮ್ಮ ವ್ಯವಹಾರಗಳಿಗೆ ಏನು ತೊಂದರೆ ಆಗುತ್ತಾ ? ಎಂದು ಪ್ರಶ್ನಿಸಿದ ಸಚಿವ ಸೋಮಣ್ಣ, ಈ ಮನೆಗಳಲ್ಲಿ ವಾಸ ಮಾಡುವುದಕ್ಕೆ ಆಗಲ್ಲ ಅಂದರೆ ಅವನ್ನೆಲ್ಲಾ ಬೀಳಿಸಿ ಅಪಾರ್ಟ್ಮೆಂಟ್ ಮಾದರಿ ವಸತಿ ಸಮುಚ್ಛಯಗಳನ್ನು ಕಟ್ಟಿದರೆ ಅಲ್ಲೇ
(ಮೊದಲ ಪುಟದಿಂದ) ಎಲ್ಲಾ ಅಧಿಕಾರಿ ಸಿಬ್ಬಂದಿಗಳೂ ಕೂಡ ವಾಸ್ತವ್ಯ ಹೂಡಬಹುದು. ಈ ಬಗ್ಗೆ ಮುಖ್ಯ ಇಂಜಿನಿಯರ್ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
ಹಾರಂಗಿ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆಗೆಯಲು ೧೩೩ ಕೋಟಿ ಬಿಡುಗಡೆಯಾಗಿದ್ದರೂ ಕೂಡ ಕಳೆದ ಎರಡು ವರುಷಗಳಿಂದಲೂ ಏಕೆ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಮಧ್ಯೆ ಮಾತನಾಡಿದ ಹಾರಂಗಿ ನೀರು ಬಳಕೆದಾರರ ಮಹಾಮಂಡಲದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ಹಾರಂಗಿ ಹೂಳಿರಲಿ, ಹಾರಂಗಿ ನಾಲೆಗಳ ಹೂಳು ಹಾಗೂ ಕಾಡು ತೆರವುಗೊಳಿಸದ ಕಾರಣ ನಾಲೆಯ ಕೊನೆಯ ಭಾಗದ ರೈತರ ಜಮೀನಿಗೆ ನೀರೇ ಹರಿಯುತ್ತಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಅನುದಾನ ಇಲ್ಲ ಅನ್ನುತ್ತಾರೆ. ನೀರು ಬಳಕೆದಾರ ಸಂಘಗಳ ಮೂಲಕ ರೈತರಿಂದ ವಸೂಲಿ ಮಾಡುವ ಕರವನ್ನು ನೀರಾವರಿ ನಿಗಮದ ಇಇ ಖಾತೆಗೆ ಹಾಕುತ್ತಾ ಇದ್ದೇವೆ. ಆದರೂ ಕೂಡ ನಾಲೆ ನಿರ್ವಹಣೆ ಮಾಡುತ್ತಿಲ್ಲವೆಂದು ಆರೋಪಿಸಿದರು.
ಇದೇ ಸಂದರ್ಭ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ನೀರು ಬಳಕೆದಾರ ಸಂಘಗಳು, ಹಾರಂಗಿ ಮಹಾಮಂಡಳ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳಲ್ಲಿ ಸಾಮರಸ್ಯ ಹಾಗೂ ಹೊಂದಾಣಿಕೆಯ ಕೊರತೆ ಇದೆ. ಅಧಿಕಾರಿಗಳು ಸಂಘಗಳನ್ನು ಕಡೆಗಣಿಸದೇ ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಹಿತ ಕಾಪಾಡಬೇಕು ಎಂಬ ಸಲಹೆ ಇಟ್ಟರು. ಸಭೆಯಲ್ಲಿದ್ದ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರು ಕೂಡ ನೀರು ಬಳಕೆದಾರ ಸಹಕಾರ ಸಂಘಗಳ ರೈತರು ಹಾಗೂ ಅಧಿಕಾರಿಗಳ ನಡುವೆ ಅಂತರವಿರಬಾರದು. ಕರ ವಸೂಲಿ ಮಾಡುವ ಜವಾಬ್ದಾರಿಯನ್ನು ನೀರು ಬಳಕೆದಾರ ಸಂಘಗಳಿಗೆ ನೀಡುವ ಮೂಲಕ ಅಧಿಕಾರಿಗಳು ಸಹಕರಿಸಬೇಕು ಎಂದರು.
ಬಳಿಕ ಇದೇ ವಿಚಾರವಾಗಿ ಸಭೆ ವಿಸ್ತ್ರತವಾಗಿ ಚರ್ಚಿಸಿ ಕರ ವಸೂಲಿ ಮಾಡುವ ಹೊಣೆಯನ್ನು ಸಂಘಗಳಿಗೆ ನೀಡುವುದು ಮತ್ತು ನಾಲೆಗಳ ಹೂಳೆತ್ತಲು ಬಳಸುವ ಅನುದಾನವನ್ನು ಕೂಡ ಸಂಘಗಳಿಗೆ ನೀಡುವಂತೆ ಹಾಗೂ ನಾಲೆಗಳ ಹೂಳು ಹಾಗೂ ಕಾಡು ತೆಗೆಯುವ ನಿರ್ವಹಣಾ ಕಾಮಗಾರಿಯನ್ನು ಸಂಘಗಳ ಮೂಲಕ ನಡೆಸುವಂತೆ ಸಭೆ ತೀರ್ಮಾನಿಸಿತು.
ಕೊಡಗಿನಲ್ಲಿ ಹೆಚ್ಚು ಮಳೆ ಸುರಿದು ಕಳೆದ ಮೂರು ವರ್ಷಗಳಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸುತ್ತಿದೆ. ಆದಾಗ್ಯೂ ಕೊಡಗಿನ ಮಳೆ ಹಾನಿ ಪ್ರದೇಶಗಳ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿ ಎಂದು ಸಭೆಯಲ್ಲಿದ್ದ ಮುಖ್ಯ ಇಂಜಿನಿಯರ್ ಶಂಕರೇಗೌಡ ಅವರಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪ್ರಸ್ತಾಪಿಸಿದಾಗ, ಸಚಿವ ಸೋಮಣ್ಣ, “ನೋಡ್ರಿ ಶಂಕರೇಗೌಡ್ರೇ ಕೊಡಗು ಜಿಲ್ಲೆಯಲ್ಲಿ ಜಾಸ್ತಿ ಮಳೆಯಾದರೆ ನೀವು ನಾವೆಲ್ಲಾ ನೀರು ಕುಡಿಯೋದು. ಮೊದಲು ಕೊಡಗಿಗೆ ಹೆಚ್ಚು ಅನುದಾನ ಹಂಚಿ. ಆಮೇಲೆ ಉಳಿದ ತಾಲೂಕುಗಳಿಗೆ ಹಂಚಿ” ಎಂದರು.
ಕುಶಾಲನಗರಕ್ಕೆ ರಿವರ್ ಪ್ರೊಟೆಕ್ಟಿಂಗ್ ವಾಲ್
ಪ್ರತೀ ವರ್ಷದ ಮಳೆಗಾಲದಲ್ಲಿ ಹೆಚ್ಚು ನೀರು ಹರಿದು ಬಂದು ಕಾವೇರಿ ಹಾಗೂ ಹಾರಂಗಿ ನದಿಗಳಲ್ಲಿ ಪ್ರವಾಹ ಏರಿಕೆಯಾದಾಗ ಕುಶಾಲನಗರ ಪಟ್ಟಣದ ಬಹುತೇಕ ಬಡಾವಣೆಗಳು ಮುಳುಗುತ್ತಿವೆ. ಇದರಿಂದಾಗಿ ಸಾಕಷ್ಟು ಹಾನಿಯಾಗುತ್ತಿದೆ. ಆದ್ದರಿಂದ ಕುಶಾಲನಗರ ಪಟ್ಟಣವನ್ನು ಪ್ರವಾಹ ಮುಕ್ತಗೊಳಿಸಲು ಕಾವೇರಿ ನೀರಾವರಿ ನಿಗಮದ ವತಿಯಿಂದ ಶಾಶ್ವತವಾದ ಯೋಜನೆ ಜಾರಿಯಾಗಬೇಕಿದೆ ಎಂದು ಶಾಸಕ ರಂಜನ್ ಸಭೆಯಲ್ಲಿ ಪ್ರಸ್ತಾಪಿಸಿದರು. ಇದೇ ಸಂದರ್ಭ ಸಚಿವ ಸೋಮಣ್ಣ, ಕುಶಾಲನಗರ ಪಟ್ಟಣದಲ್ಲಿ ಕಾವೇರಿ ನದಿಯಿಂದ ಪ್ರವಾಹ ತಪ್ಪಿಸಲು ನದಿಯ ದಂಡೆಯಲ್ಲಿ ಶಾಶ್ವತವಾದ ತಡೆಗೋಡೆ ಕಟ್ಟಬೇಕಿದೆ. ಇದಕ್ಕೆ ಅಪಾರ ಪ್ರಮಾಣದ ಅನುದಾನ ಅಗತ್ಯವಿರುವುದರಿಂದ ಸಂಸದ ಪ್ರತಾಪ್ ಸಿಂಹ ಕೇಂದ್ರದಿAದಲೂ ಪ್ರಯತ್ನಿಸಲಿ. ತಾನು ಮುಖ್ಯಮಂತ್ರಿಗಳ ಜೊತೆಯೂ ಮಾತಾಡುತ್ತೇನೆ ಎಂದರು. ಬಳಿಕ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನದಿಗೆ ತಡೆಗೋಡೆ ಕಟ್ಟಲು ಕೇಂದ್ರ ಸರ್ಕಾರದಲ್ಲಿ ಯಾವ ಯೋಜನೆ ಇದೆಯೋ ನನಗೆ ಮಾಹಿತಿಯಿಲ್ಲ. ಈ ಬಗ್ಗೆ ನಿಗಮದ ಮುಖ್ಯ ಇಂಜಿನಿಯರ್ ಅವರಿಂದ ತಿಳಿದುಕೊಂಡು ಕ್ರಿಯಾ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಶಾಸಕ - ಸಂಸದರಲ್ಲಿ ದ್ವಂದ್ವತೆ
ಕಾವೇರಿ ಹಾಗೂ ಹಾರಂಗಿ ನದಿಗೆ ಕಾಫಿ ಪಲ್ಪಿಂಗ್ ಘಟಕಗಳಿಂದ ತ್ಯಾಜ್ಯ ನೀರು ಹರಿದು ಬಂದು ಸೇರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸಭೆಯಲ್ಲಿ ಹೇಳಿದಾಗ, ಹುಣಸೂರಿನ ಲಕ್ಷ್ಮಣತೀರ್ಥ ನದಿಗೂ ಯಥೇಚ್ಛವಾದ ತ್ಯಾಜ್ಯ ಸೇರುತ್ತಿದೆ ಎಂದು ಸಚಿವ ಸೋಮಣ್ಣ ಹೇಳಿದರು. ಮುಖ್ಯ ಇಂಜಿನಿಯರ್ ಶಂಕರೇಗೌಡ, ನದಿಗಳಿಗೆ ಕಾಫಿ ಪಲ್ಪಿಂಗ್ ಮೊದಲಾದ ತ್ಯಾಜ್ಯ ಹರಿದು ಬರದಂತೆ ಎಚ್ಚರವಹಿಸಬೇಕೆಂದು ಸಂಬAಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ನಿಗಾವಹಿಸಲಾಗುವುದು ಎಂದಾಗ, ಗರಂ ಆದ ಶಾಸಕ ರಂಜನ್, ನದಿಗೆ ಯಾರೂ ಕೂಡ ಕಾಫಿ ಪಲ್ಪಿಂಗ್ ತ್ಯಾಜ್ಯ ಬಿಡುತ್ತಿಲ್ಲ. ಯಾರು ಹೇಳಿದ್ದು ? ಎಲ್ಲಿಯ ಮಾಹಿತಿ ಎಂದು ಸಂಸದರನ್ನೇ ಪ್ರಶ್ನಿಸಿದಾಗ ಸಂಸದರು ಮೌನ ವಹಿಸಿದ ಪ್ರಸಂಗವೂ ನಡೆಯಿತು.
ಗುಡ್ಡಗಳು ಕುಸಿಯದಂತೆ ತಡೆಯಿರಿ - ಶಾಸಕ ಎ.ಟಿ. ರಾಮಸ್ವಾಮಿ
ಹಾರಂಗಿ ಜಲಾಶಯಕ್ಕೆ ೨೦೧೮ರಲ್ಲಿ ಸುರಿದ ರಕ್ಕಸ ಸ್ವರೂಪಿ ಮಳೆಯಿಂದಾಗಿ ಗುಡ್ಡಗಳೇ ಕುಸಿದು ಜಲಾಶಯಕ್ಕೆ ಹರಿದು ಬಂದು ಹೂಳಿನ ಪ್ರಮಾಣ ಅಧಿಕವಾಗಿದೆ ಎಂದು ಶಾಸಕ ರಂಜನ್ ಹೇಳಿದಾಗ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಹಾರಂಗಿ ಜಲಾಶಯ ಕೊಡಗಿನ ಪ್ರಕೃತಿಯೊಳಗಿನ ಬೆಟ್ಟ ಗುಡ್ಡಗಳಿಂದ ಕೂಡಿದೆ. ಗುಡ್ಡಗಳು ಕುಸಿದು ಜಲಾಶಯದಲ್ಲಿ ಬರೀ ಹೂಳು ತುಂಬೋದನ್ನು ತಡೆಯಬೇಕಿದೆ. ಅಂದರೆ ಹೋಮ್ ಸ್ಟೇ, ರೆಸಾರ್ಟ್ಗಳ ನಿರ್ಮಾಣ, ಇಂಗುಗುAಡಿ, ರಸ್ತೆ ನಿರ್ಮಾಣ ದಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಮೂಲಕ ಕುಸಿಯುವ ಗುಡ್ಡಗಳನ್ನು ತಡೆದು ನಿಲ್ಲಿಸುವಂತಹ ಕೆಲಸವಾಗಬೇಕಿದೆ. ಸುಂದರ ವಾತಾವರಣ, ಒಳ್ಳೆಯ ಪರಿಸರದಲ್ಲಿರುವ ಕೊಡಗಿನ ಮಳೆಯ ನೀರನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ. ಆ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡಲಿ ಎಂದರು.
ತಜ್ಞರ ಸಲಹೆ ಪಾಲಿಸಿ - ಗುಡ್ಡ ಕುಸಿತ ನಿಲ್ಲಿಸಿ : ಹೆಚ್. ವಿಶ್ವನಾಥ್
ಕೊಡಗಿನಲ್ಲಿ ಮಳೆಗಾಲದಲ್ಲಿ ಗುಡ್ಡಗಳು ಕುಸಿಯದಂತೆ ತಡೆಯಲು ಶಾಶ್ವತವಾದ ಯೋಜನೆಗಳನ್ನು ಹಾಕಿಕೊಳ್ಳಲು ನುರಿತ ಇಂಜಿನಿಯರಿAಗ್ ತಜ್ಞರ ಜೊತೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕಿದೆ. ಇದು ಬಿಟ್ಟು ಪ್ರವಾಹ ಬಳಿಕ ಕುಸಿದ ಗುಡ್ಡ, ಬಿರುಕು ಬಿಟ್ಟ ರಸ್ತೆಗಳನ್ನು ಸರಿಪಡಿಸಲು ಶಾಸಕ, ಸಚಿವರುಗಳು ಅಲ್ಲೊಂದು ಇಲ್ಲೊಂದು ಕಾಮಗಾರಿಗಳನ್ನು ತಮಗಿಷ್ಟವಾದ ಗುತ್ತಿಗೆದಾರರಿಗೆ ಕೊಡುತ್ತಿದ್ದಾರೆ. ಇದು ನಿಲ್ಲಬೇಕು. ಕೂಡಲೇ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ನುರಿತ ತಂತ್ರಜ್ಞರ ಜೊತೆ ಸಮಾಲೋಚಿಸಿ ಭವಿಷ್ಯದ ಕೊಡಗನ್ನು ಕಟ್ಟಲು ಪ್ರಯತ್ನಿಸಿ ಎಂಬ ಸಲಹೆ ನೀಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಮೈಸೂರು ಜಿಲ್ಲಾ ಪಂಚಾಯಿತಿ ಸಿಇಓ ಜಗದೀಶ್, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ಇದ್ದರು. -ಕೆ.ಎಸ್.ಮೂರ್ತಿ