ಕೂಡಿಗೆ, ಜು. ೧೬: ಭರ್ತಿಯಾದ ಹಾರಂಗಿಯ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಬಾಗಿನ ಅರ್ಪಿಸಿದರು.
ಸಚಿವ ವಿ ಸೋಮಣ್ಣ ಲೋಕಸಭಾ ಸದಸ್ಯ ಪ್ರತಾಪ್‌ಸಿಂಹ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಪಿರಿಯಾಪಟ್ಟಣ ಶಾಸಕ ಮಹದೇವ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಹಾಸನದ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಇಲಾಖೆಯ ಮುಖ್ಯಸ್ಥರ ಸಮ್ಮುಖದಲ್ಲಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಹಾರಂಗಿ ಅಣೆಕಟ್ಟೆಗೆ ನದಿಗೆ ಪೂಜೆ ಸಲ್ಲಿಸಿ ನಾಲ್ಕು ಬಾಗಿನವನ್ನು ಅರ್ಪಿಸಲಾಯಿತು.
ನಂತರ ಸಚಿವರು ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಬರುವ ನೀರನ್ನು ಅಣೆಕಟ್ಟೆಯ ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ ಹರಿಸಲು ಚಾಲನೆ ನೀಡಿದರು.
ಈ ಮೂಲಕ ಅಣೆಕಟ್ಟೆಯಿಂದ ನದಿಗೆ ೮,೦೦೦
(ಮೊದಲ ಪುಟದಿಂದ) ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ೬,೦೦೦ ಸಾವಿರ ಕ್ಯೂಸೆಕ್ಸ್ ನೀರನ್ನು ಮುಖ್ಯ ದ್ವಾರದ ಮೂಲಕ ೨೦೦೦ ಕ್ಯೂಸೆಕ್ಸ್ ನೀರನ್ನು ವಿದ್ಯುತ್ ಘಟಕದ ಮೂಲಕ ನದಿಗೆ ಹರಿಸಲಾಗುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ ಕೊಡಗು ಜಿಲ್ಲೆಯಲ್ಲಿ ಉತ್ತಮವಾದ ಮುಂಗಾರು ಮಳೆಯಾದ್ದರಿಂದ ಜಲಾಶಯ ಬಹು ಬೇಗ ಭರ್ತಿಯಾಗಿದೆ. ಇದರಿಂದಾಗಿ ರೈತಾಪಿ ವರ್ಗ ಸಂತೃಪ್ತವಾಗಿ ಬೆಳೆ ಕಾರ್ಯ ನಡೆಸಲು ಅನುವಾಗಿದೆ ಎಂದರು.
ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮಾತನಾಡಿ, ಸಂಸದನಾದ ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದದ್ದು, ಸಂತಸ ತಂದಿದೆ. ರೈತರ ಬದುಕು ಹಾರಂಗಿ ನೀರಿನಿಂದ ಬಂಗಾರವಾಗಲಿ ಎಂದು ಆಶಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಕಾವೇರಿ ನೀರಾವರಿ ನಿಗಮದ ಅಭಿಯಂತರ ಚನ್ನಕೇಶವ ಸಹಾಯಕ ಅಭಿಯಂತರ ಮಂಜುನಾಥ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದ ಜನಪ್ರತಿನಿಧಿಗಳು ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.
- ನಾಗರಾಜಶೆಟ್ಟಿ / ಮೂರ್ತಿ