ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತ ಮಳೆಯ ಆರ್ಭಟ ಹೆಚ್ಚಾಗಿದ್ದು, ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ನದಿ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿದೆ. ತಲಕಾವೇರಿ, ಭಾಗಮಂಡಲ, ಐಯ್ಯಂಗೇರಿ, ನಾಪೋಕ್ಲು, ಚೆಯ್ಯಂಡಾಣೆೆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಹೆಚ್ಚಾಗಿದೆ. ಹೆಗ್ಗಳ, ತೋರ, ಬೂದಿಮಾಳದಲ್ಲಿ ಮಳೆಯಾದ ಕಾರಣ ಕದನೂರು ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಿದೆ.

ಕಳೆದ ೨೪ ಗಂಟೆಯಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ೬೪.೨ ಮಿ. ಮೀಟರ್ ಮಳೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾದ ಕಾರಣ ಪಟ್ಟಣದ ಅರಸುನಗರ, ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ ನೆಹರುನಗರ ಬೆಟ್ಟ ಪ್ರದೇಶದಲ್ಲಿ ಅಪಾಯದಲ್ಲಿರುವ ೬೬ ಮನೆಗಳಿಗೆ ಮನೆ ಖಾಲಿ ಮಾಡುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಅವರುಗಳು ಸ್ವಯಂ ಪ್ರೇರಿತರಾಗಿ ಸುರಕ್ಷಿತ ಸ್ಥಳಗಳಿಗೆ ತೆರಳ ಬಹುದಾಗಿದೆ. ಬೇರೆಡೆಗೆ ತೆರಳಲು ಸಾಧ್ಯವಾಗದಿದ್ದರೆ ಪಟ್ಟಣದಲ್ಲಿ ನಿರ್ಮಾಣ ಮಾಡಿರುವ ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದು ಕೊಳ್ಳಬಹುದು. ೬೬ ಮನೆಗಳ ಸದಸ್ಯರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.