ಮಡಿಕೇರಿ, ಜೂ. ೧೪: ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು, ನಾಯಕರುಗಳ ನಡುವೆ ಅಸಮಾಧಾನ ಮುಸುಕಿನ ಗುದ್ದಾಟಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದರೂ ಕೊನೆಗೂ ತೀತಿರ ಧರ್ಮಜ ಉತ್ತಪ್ಪ ಅವರನ್ನು ಕಾಯಾಧ್ಯಕ್ಷರನ್ನಾಗಿ ನೇಮಕ ಮಾಡಿ ತೆರೆ ಎಳೆಯಲಾಗಿದೆ. ತೆರವಾಗಿದ್ದ ಮಡಿಕೇರಿ ಬ್ಲಾಕ್ ಕಾಂಗ್ರೆಸ್‌ಗೆ ಅಧ್ಯಕ್ಷರನ್ನಾಗಿ ಹಂಸ ಅವರನ್ನು ನೇಮಕ ಮಾಡಲಾಗಿದೆ. ಇದೀಗ ಮಡಿಕೇರಿ ನಗರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕಂಡುಬAದಿದ್ದು, ಪಕ್ಷದಲ್ಲಿ ಪ್ರಬಲ ಆಕಾಂಕ್ಷಿಗಳಿದ್ದರೂ ಪಕ್ಷದ ವತಿಯಿಂದ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಹೊಸಬರಿಗೆ ನೀಡಲು ತೀರ್ಮಾನಿಸಿರುವ ಬಗ್ಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ನಡುವೆ ಆಕಾಂಕ್ಷಿಗಳೂ ಸೇರಿದಂತೆ ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆ ಯಾಡುತ್ತಿರುವದು ಗುಟ್ಟಾಗಿ ಉಳಿದಿಲ್ಲ.
ಇತ್ತೀಚೆಗೆ ನಡೆದ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ವಿಫಲವಾದ ಬಳಿಕ ಪಕ್ಷದ ನಗರ ಅಧ್ಯಕ್ಷರಾಗಿದ್ದ ಕೆ.ಯು.ಅಬ್ದುಲ್ ರಜಾಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ತೀರ್ವ ಪೈಪೋಟಿ ಕಂಡುಬರುತ್ತಿದೆ. ಈ ಪೈಕಿ ಪ್ರಬಾರ ಅಧ್ಯಕ್ಷರಾಗಿರುವ, ಪಕ್ಷದ ಉಪಾಧ್ಯಕ್ಷ ಟಿ.ಪಿ.ನಾಣಯ್ಯ, ಪ್ರಧಾನ ಕಾರ್ಯದರ್ಶಿ ಪ್ರಭು ರೈ, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ಹಿರಿಯ ಸದಸ್ಯ ಮುನೀರ್ ಅಹಮ್ಮದ್ ಅವರುಗಳು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಇವರುಗಳು ಪಕ್ಷದ ನಾಯಕರಲ್ಲಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
ಹೊಸಬರಿಗೆ ಸ್ಥಾನ..?
ಈ ನಡುವೆ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿರುವ, ನಗರಸಭಾ ಸದಸ್ಯರಾಗಿ ಚುನಾಯಿತರಾಗಿರುವ ಬಿ.ವೈ. ರಾಜೇಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷದ ಹಿರಿಯ ಮುಖಂಡರು ಒಲವು ತೋರಿರುವ ದಾಗಿ ತಿಳಿದುಬಂದಿದೆ. ಇದೀಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ, ಮಾಜಿ ಸಚಿವರುಗಳಾದ ಯಂ.ಸಿ.ನಾಣಯ್ಯ ಹಾಗೂ ಬಿ.ಎ.ಜೀವಿಜಯ ಅವರುಗಳೊಂದಿಗೆ ಆತ್ಮೀಯತೆ ಹೊಂದಿರುವ ರಾಜೇಶ್ ಪರವಾಗಿ ಹಿರಿಯರು ಒಲವು ತೋರುತ್ತಿರುವದಾಗಿ ಹೇಳಲಾಗುತ್ತಿದೆ. ಆದರೆ, ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ಹೊರತುಪಡಿಸಿ ಹೊಸಬರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತಿರುವ ಬಗ್ಗೆ ಕಾರ್ಯಕರ್ತರೊಳಗೆ ಅಸಮಾಧಾನ ಮೂಡಿದೆ.
ಡಿಸಿಸಿಯಲ್ಲಿ ಹುದ್ದೆ..!
ಇತ್ತ ಆಕಾಂಕ್ಷಿಗಳ ಮನವೊಲಿಸುವ ಪ್ರಯತ್ನವಾಗುತ್ತಿದ್ದು, ಅವರುಗಳಿಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹುದ್ದೆಗಳನ್ನು ನೀಡುವದಾಗಿ ಹೇಳಲಾಗುತ್ತಿದೆ. ಆದರೆ ಆಕಾಂಕ್ಷಿಗಳು ಮಾತ್ರ ಅಧ್ಯಕ್ಷ ಸ್ಥಾನದತ್ತಲೇ ತಮ್ಮ ಚಿತ್ತ ಹರಿಸಿದ್ದಾರೆ. ಸದ್ಯದಲ್ಲೇ ನಗರ ಕಾಂಗ್ರೆಸ್‌ಗೆ ಅಧ್ಯಕ್ಷರ ನೇಮಕವಾಗಲಿದ್ದು, ಯಾರ ಪಾಲಿಗೆ ಒಲಿಯಲಿದೆ ಎಂಬದನ್ನು ಕಾದು ನೋಡಬೇಕಷ್ಟೆ..!
-ಸಂತೋಷ್