ಮಡಿಕೇರಿ, ಜು. ೧೪: ಕಾಂಗ್ರೆಸ್ ಪಕ್ಷದೊಳಗೆ ಆಂತರಿಕವಾದ ಅಸಮಾಧಾನಗಳು ಇದೀಗ ಹೆಚ್ಚಾಗಿದ್ದು, ಇದರ ಪರಿಣಾಮದಿಂದಾಗಿ ಪಕ್ಷದಲ್ಲಿ ಭಾರೀ ಸಂಚಲನ ಉಂಟಾಗುವ ಸಾಧ್ಯತೆಯ ಕುರಿತು ಮಾತು ಕೇಳಿ ಬಂದಿದೆ. ಅದರಲ್ಲೂ ಪ್ರಮುಖವಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಈ ಬೆಳವಣಿಗೆ ನಡೆಯುತ್ತಿರುವ ಕುರಿತು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಜಿಲ್ಲಾ ಕಾಂಗ್ರೆಸ್ ಮುಖಂಡರಾಗಿ ರುವ ರಾಜ್ಯ ಐ.ಎನ್.ಟಿ.ಯು.ಸಿ. ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಹಲವು ಪ್ರಮುಖರು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಒಂದು ಹೆಜ್ಜೆ ಹೊರಹಾಕಿರುವುದಾಗಿ ಹೇಳಲಾಗುತ್ತಿದೆ. ಈ ಬಣದವರು ಇದೀಗ ಜೆ.ಡಿ.ಎಸ್. ಪಕ್ಷವನ್ನು ಸೇರ್ಪಡೆಗೊಳ್ಳಲಿರುವ ಕುರಿತು ನಿರ್ಧಾರಕ್ಕೆ ಬಂದಿರುವುದಾಗಿ ‘ಶಕ್ತಿ’ಗೆ ತಿಳಿದುಬಂದಿದೆ.
ಈ ತಂಡವು ಈಗಾಗಲೇ ಜೆ.ಡಿ.ಎಸ್.ನ ಮುಖಂಡರುಗಳಾದ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದೆ. ಅಲ್ಲದೆ ಜೆ.ಡಿ.ಎಸ್.ನ ಜಿಲ್ಲಾ ಉಸ್ತುವಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ತೋರಿದ್ದು ತೆರೆಮರೆಯಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ೨೦೧೮ ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭ ನಾಪಂಡ ಮುತ್ತಪ್ಪ ಅವರು ಕೂಡ ಮಡಿಕೇರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಎ.ಐ.ಸಿ.ಸಿ. ಮುಖಂಡ ಕೆ.ಸಿ. ವೇಣುಗೋಪಾಲ್, ಎಂ.ಆರ್. ಸೀತಾರಾಮ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಪ್ರಮುಖರು ಇವರ ಮನವೊಲಿಸಿ ನಾಮಪತ್ರ ಹಿಂತೆಗೆಸಿದ್ದರು. ಇವರನ್ನು ಸದ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವುದು ಅಥವಾ ರಾಜ್ಯದಲ್ಲಿ ಪ್ರಮುಖ ಸ್ಥಾನ ನೀಡುವ ಭರವಸೆ ನೀಡಲಾಗಿತ್ತೆನ್ನಲಾಗಿದೆ. ಆದರೆ ಚುನಾವಣೆ ಮುಗಿದ ಬಳಿಕ ಕಡೆಗಣಿಸಿದ ಮುನಿಸು ಇವರಲ್ಲಿದೆ. ಕೇವಲ ಪಕ್ಷಕ್ಕೆ ಆರ್ಥಿಕ ನೆರವಿಗೆ ಮಾತ್ರ ತಮ್ಮನ್ನು ಬಳಸಿಕೊಳ್ಳಲಾಗುತ್ತಿದೆ. ಉಳಿದ ವಿಚಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಮುತ್ತಪ್ಪ ಅಸಮಾಧಾನಲ್ಲಿದ್ದಾರೆನ್ನಲಾಗಿದೆ.
ಈ ಅವಕಾಶವನ್ನು ಇದೀಗ ಜೆ.ಡಿ.ಎಸ್. ಬಳಸಿಕೊಳ್ಳಲು ಮುಂದಾಗಿದ್ದು, ಬಿ.ಎ. ಜೀವಿಜಯ ಅವರು ಪಕ್ಷ ತೊರೆದಿರುವ ನಷ್ಟವನ್ನು ಭರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಎಂದು ಹೇಳಲಾಗಿದೆ. ಪ್ರಜ್ವಲ್ ರೇವಣ್ಣ ನೇರವಾಗಿ ಮುತ್ತಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೂ ಇದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ ಎಂಬದು ಇದೀಗ ಬಹಿರಂಗವಾಗಿದೆ.
ಜಿ.ಪA. - ತಾ.ಪಂ. ಚುನಾವಣೆಯೊಳಗೆ ಸಂಚಲನ
ಒAದುವೇಳೆ ಮುತ್ತಪ್ಪ ಹಾಗೂ ಇತರ ಬೆಂಬಲಿಗರ ಈ ತೀರ್ಮಾನವೇ ಅಂತಿಮವಾದಲ್ಲಿ ಮುಂಬರಲಿರುವ ಜಿ.ಪಂ. - ತಾ.ಪಂ. ಚುನಾವಣೆ ಯೊಳಗೆ ಭಾರೀ ರಾಜಕೀಯ ಸಂಚಲನ ಉಂಟಾಗುವುದು ಖಚಿತವಾಗಿದೆ.
ಬೆಳವಣಿಗೆ ನಿಜ...
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ನಾಪಂಡ ಮುತ್ತಪ್ಪ ಅವರು ಪ್ರಸ್ತುತದ ಬೆಳವಣಿಗೆ ನಿಜ ಎಂಬದನ್ನು ಖಾತರಿಪಡಿಸಿದ್ದಾರೆ. ತಮಗೆ ನೀಡಿದ್ದ ಯಾವುದೇ ಭರವಸೆಯನ್ನು ಕಾಂಗ್ರೆಸ್ ಮುಖಂಡರು ಈಡೇರಿಸಿಲ್ಲ. ಈ ವಿಚಾರವನ್ನು ಜಿಲ್ಲೆಯ ಪ್ರಮುಖ ನಾಯಕರು ಹಾಗೂ ರಾಜ್ಯದ ಪ್ರಮುಖರ ಗಮನಕ್ಕೆ ತಂದಿರುವುದಾಗಿಯೂ ಹೇಳಿದ ಅವರು, ಈಗಾಗಲೇ ಒಂದು ಹೆಜ್ಜೆ ಹೊರಗಿಡಲಾಗಿದೆ ಎಂದಿದ್ದಾರೆ.
ಕಾAಗ್ರೆಸ್ ಪಕ್ಷದಲ್ಲಿನ ಒಳಜಗಳ, ಬಣರಾಜಕೀಯವನ್ನು ಯಾರೂ ಸರಿಪಡಿಸುತ್ತಿಲ್ಲ. ಬದಲಿಗೆ ಇದನ್ನೇ ದೊಡ್ಡದು ಮಾಡಲಾಗುತ್ತಿದೆ. ಒಗ್ಗೂಡಿಸುವ ಪ್ರಯತ್ನ ಯಾರಿಂದಲೂ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಾವು ಮಾತ್ರವಲ್ಲ ದೊಡ್ಡ ತಂಡವೇ ಈಗಿನ ಬೆಳವಣಿಗೆಯಲ್ಲಿದೆ. ದಕ್ಷಿಣ ಕೊಡಗಿನಿಂದಲೂ ಸಾಕಷ್ಟು ಪ್ರಮುಖರಿದ್ದಾರೆ. ಎಲ್ಲದಕ್ಕೂ ಕಾದುನೋಡಿ ಎಂದರು. ಒಂದುವೇಳೆ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚರ್ಚೆಗೆ ಕರೆದಲ್ಲಿ ಚರ್ಚೆಗೆ ಸಿದ್ಧವಿರುವುದಾಗಿಯೂ ಮುತ್ತಪ್ಪ ಪ್ರತಿಕ್ರಿಯಿಸಿದ್ದಾರೆ. -ಶಶಿ