*ವೀರಾಜಪೇಟೆ, ಜು. ೧೪: ಕೊಡಗಿನಲ್ಲಿ ೨೦೧೮ರಲ್ಲಿ ಮೊದಲ ಬಾರಿ ವಿಕೋಪ ಸಂಭವಿಸಿದಾಗ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ೨೦೦ ಮೀಟರ್ ಆಳಕ್ಕೆ ಬಿರುಕು ಕಾಣಿಸಿಕೊಂಡಿತ್ತು. ಅಲ್ಲದೇ ನೆಹರು ನಗರದಲ್ಲಿಯೂ ಈ ರೀತಿಯ ಬಿರುಕು ಕಾಣಿಸಿಕೊಂಡು ಜನರಲ್ಲಿ ಆತಂಕ ಮನೆಮಾಡಿತ್ತು. ಸ್ಥಳಕ್ಕೆ ಭಾರತೀಯ ಗಣಿ ಮತ್ತು ಭೂಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಈ ಜಾಗದ ಬಗ್ಗೆ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದರು.
ಆ ಪ್ರಕಾರ ಈ ಬಿರುಕು ಅಪಾಯಕಾರಿಯಾಗಿದೆ. ಈ ಪ್ರದೇಶ ಜನವಸತಿಗೆ ಸುರಕ್ಷಿತವಾಗಿಲ್ಲ, ಅತಿಯಾದ ಮಳೆಬಂದಲ್ಲಿ ಬೆಟ್ಟ ಪ್ರದೇಶದಲ್ಲಿ ‘ಮಡ್ ಫ್ಲೋ’ ಆಗುತ್ತಾ ಬೆಟ್ಟ ಜಾರುವ ಸಂಭವವಿದೆ ಎನ್ನುವ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಕುರಿತಂತೆ ವೀರಾಜಪೇಟೆ ತಾಲೂಕು ದಂಡಾಧಿಕಾರಿ ಯೋಗಾನಂದ ಅವರು ಕಂದಾಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದರು. ಆ ಸಭೆಯಲ್ಲಿ ಮಳೆಗಾಲದಲ್ಲಿ ಬೆಟ್ಟ ಪ್ರದೇಶದಲ್ಲಿ ಸುರಕ್ಷಿತವಲ್ಲದ ಸ್ಥಳದಲ್ಲಿ ವಾಸಿಸುವ ಜನರ ಕ್ಷೇಮ ಕಾಯಲು, ಅವರಿಗೆ ಆದಷ್ಟು ಬೇಗ ಲಸಿಕೆ ಹಾಕಿಸಿ, ಸಂತ್ರಸ್ತರ ಶಿಬಿರ ತೆರೆಯಬೇಕಾದಲ್ಲಿ ಅಲ್ಲಿ ಕೆಲಸ ನಿರ್ವಹಿಸಲು ಈಗಿನಿಂದಲೇ ಸ್ವಯಂಸೇವಕರಿದ್ದರೆ ಅವರನ್ನು ಗುರುತಿಸಿ ಅವರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಿ, ಗುರುತಿನ ಚೀಟಿಗಳನ್ನು ವಿತರಿಸಿ, ಜೊತೆಗೆ ಬೆಟ್ಟ ಪ್ರದೇಶದ ನಿವಾಸಿಗಳಿಗೆ ನೋಟೀಸ್ ಮಾಡಲು ಸೂಚಿಸಿದರು.
ಅದರಂತೆ ಪಟ್ಟಣ ಪಂಚಾಯಿತಿಯಿAದ ಮಲೆತಿರಿಕೆ ಬೆಟ್ಟದ ೫೭ ಮನೆಗಳಿಗೆ ಹಾಗೂ ನೆಹರು ನಗರದ ೯ ಮನೆಗಳಿಗೆ ಸಂಬAಧಿಕರ ಮನೆಗೆ ಇಲ್ಲವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದ್ದು, ಈ ತಿಂಗಳ ನಂತರ ಮಳೆ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ನಚ್ಚರಿಕೆಯೊಂದಿಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿ ಮಾಹಿತಿ ನೀಡಿದರು.
ಆದರೆ ಕೊರೊನಾ ಸಮಯದಲ್ಲಿ ಯಾವ ಸಂಬAಧಿಗಳು ತಾನೇ ನಮ್ಮ ಮನೆಗೆ ಬನ್ನಿ ಎಂದು ಇವರನ್ನು ಸ್ವಾಗತಿಸುತ್ತಾರೆ. ಅಲ್ಲದೇ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಈ ನಿವಾಸಿಗಳು ಸಂತ್ರಸ್ತರ ಶಿಬಿರಕ್ಕೆ ಹೋಗುವುದಾದರೂ ಯಾವ ಧೈರ್ಯದಲ್ಲಿ ಎನ್ನುವುದೇ ಈಗ ನಿವಾಸಿಗಳ ಮುಂದಿರುವ ಪ್ರಶ್ನೆ.