ಮಡಿಕೇರಿ, ಜು. ೧೩: ಜಿಲ್ಲೆಯಲ್ಲಿ ಪ್ರಸ್ತುತ ಕೃಷಿ ಕೆಲಸದ ಸಮಯವಾಗಿದ್ದು, ಈತನಕ ಮಳೆಯ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗ ವಿವಿಧ ಕೆಲಸ - ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೂನ್ ಎರಡನೇಯ ವಾರದಲ್ಲಿ ಏಳೆಂಟು ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರೀ ಗಾಳಿ - ಮಳೆಯಾಗಿದ್ದು, ನಂತರದಲ್ಲಿ ಮುಂಗಾರು ಕ್ಷೀಣಗೊಂಡಿತ್ತು. ಬಹುತೇಕ ಬಿಸಿಲಿನ ವಾತಾವರಣವೇ ಕಂಡುಬರುತ್ತಿದ್ದರಿAದ ರೈತರು ಆತಂಕ ಪಡುವಂತಾಗಿತ್ತು. ಇದೀಗ ಕಳೆದ ಮೂರು ದಿನಗಳಿಂದ ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವೋ ಎಂಬAತೆ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಮಳೆ ತುಸು ಬಿರುಸು ಕಾಣುತ್ತಿರುವದರೊಂದಿಗೆ ಕೃಷಿ ಕೆಲಸ ಕಾರ್ಯಗಳೂ ಚುರುಕುಗೊಳ್ಳುತ್ತಿವೆ.
(ಮೊದಲ ಪುಟದಿಂದ) ವಿವಿಧೆಡೆಗಳಲ್ಲಿ ಭತ್ತದ ಕೃಷಿ ಹಾಗೂ ಮುಸುಕಿನ ಜೋಳದ ಬೆಳೆಯ ಕೆಲಸಕ್ಕೆ ಚಾಲನೆ ದೊರೆತಿದೆ. ಈಗಿನ ಮಳೆ ಕೃಷಿ ಕೆಲಸಕ್ಕೆ ಪೂರಕವಾಗಿದ್ದು, ರೈತರು ತಮ್ಮ ಕೆಲಸವನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ೩೦,೫೦೦ ಹೆಕ್ಟೇರ್‌ನಲ್ಲಿ ಭತ್ತ ಹಾಗೂ ೪ ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಜಿಲ್ಲೆಯ ೧೬ ರೈತ ಸಂಪರ್ಕಗಳ ಮೂಲಕ ಹೈಬ್ರಿಡ್ ಹಾಗೂ ವಿವಿಧ ತಳಿಯ ಬಿತ್ತನೆ ಬೀಜಗಳನ್ನು ಒದಗಿಸಲು ಕೃಷಿ ಇಲಾಖೆ ಕ್ರಮಕೈಗೊಂಡಿದೆ. ಈಗಾಗಲೇ ವಿವಿಧ ರೈತ ಸಂಪರ್ಕ ಕೇಂದ್ರಗಳ ಮೂಲಕ ೧೮೮೬ ಕ್ವಿಂಟಾಲ್ ಭತ್ತದ ಬಿತ್ತನೆ ಬೀಜದ ಸಂಗ್ರಹ ಮಾಡಲಾಗಿದ್ದು, ರೈತರು ೧೫೦೦ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ಪಡೆದುಕೊಂಡಿದ್ದಾರೆ. ೪೨ ಕ್ವಿಂಟಾಲ್‌ನಷ್ಟು ಮುಸುಕಿನ ಜೋಳದ ಬಿತ್ತನೆ ಬೀಜವನ್ನೂ ರೈತರು ಪಡೆದಿರುವದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ. ಶೇಕ್ ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತದ ಮಾಹಿತಿಯಂತೆ ೪೨ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಸಸಿಮಡಿ ತಯಾರಿಗೆ ಮುಂದಾಗಲಾಗಿದೆ. ಇದರೊಂದಿಗೆ ಈ ಕಾರ್ಯ ಇನ್ನೂ ಹಲವೆಡೆ ಪ್ರಗತಿಯಲ್ಲಿದೆ. ಮುಂದಿನ ವಾರದ ತನಕವೂ ವಿವಿಧ ತಳಿಯ ಬಿತ್ತನೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಈಗಾಗಲೇ ಕೆಲವೆಡೆ ರೈತರು ಸಸಿಮಡಿ ತಯಾರಿ ಮಾಡಿಕೊಂಡಿದ್ದು, ನಾಟಿ ಕೆಲಸವನ್ನೂ ಪ್ರಾರಂಭಿಸಿದ್ದಾರೆ ಎಂದು ಶಬನಾ ಅವರು ತಿಳಿಸಿದರು. ನಾಪೋಕ್ಲುವಿನ ವಿವಿಧೆಡೆ ಸೂರ್ಲಬ್ಬಿ ವಿಭಾಗಗಳಲ್ಲಿ ಈಗಾಗಲೇ ನಾಟಿ ಕೆಲಸ ಕೂಡ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವದೇ ಕೊರತೆ ಇಲ್ಲ. ಸುಮಾರು ೨೦ ಸಾವಿರ ಮೆಟ್ರಿಕ್ ಟನ್‌ನಷ್ಟು ಗೊಬ್ಬರ ದಾಸ್ತಾನು ಇರುವದಾಗಿ ಅವರು ಮಾಹಿತಿಯಿತ್ತರು.
ಮಡಿಕೇರಿ ಹೋಬಳಿಗೆ ಅಧಿಕ ಮಳೆ
ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ಹೋಬಳಿಯಲ್ಲಿ ೨.೫೬ ಇಂಚಿನಷ್ಟು ಮಳೆಯಾಗಿದೆ. ಉಳಿದಂತೆ ಭಾಗಮಂಡಲ ೧.೮೦, ನಾಪೋಕ್ಲು ೧.೧೩, ಸಂಪಾಜೆ ೦.೯೪, ವೀರಾಜಪೇಟೆ ೦.೮೮, ಹುದಿಕೇರಿ ೦.೭೬, ಶ್ರೀಮಂಗಲ ೦.೮೦, ಪೊನ್ನಂಪೇಟೆ ೦.೪೮, ಅಮ್ಮತ್ತಿ ಹೋಬಳಿಗೆ ೦.೫೦ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕಸಬಾದಲ್ಲಿ ೧.೫೦ ಶನಿವಾರಸಂತೆ ೧.೫೬, ಶಾಂತಳ್ಳಿ ೨.೩೫, ಕೊಡ್ಲಿಪೇಟೆ ೦.೭೫, ಕುಶಾಲನಗರ ೦.೪೦ ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ೦.೯೨ ಇಂಚು ಮಳೆಯಾಗಿದೆ. ತಲಕಾವೇರಿಗೆ ಕಳೆದ ೨೪ ಗಂಟೆಯಲ್ಲಿ ೨.೮೬ ಇಂಚು ಮಳೆಯಾಗಿದೆ. ತಾ. ೧೨ ರಂದು ಇಲ್ಲಿಗೆ ೧.೩೫ ಇಂಚು ಮಳೆಯಾಗಿದೆ.