ಮಡಿಕೇರಿ, ಜು. ೧೩: ಕೇರಳ ರಾಜ್ಯದಲ್ಲಿ ಕೊರೊನಾ ಹಾಗೂ ಡೆಲ್ಟಾ ಪ್ಲಸ್ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಕೊಡಗು ಹಾಗೂ ಕೇರಳ ಗಡಿಯಲ್ಲಿ ವಿಶೇಷ ಕಣ್ಗಾವಲು ಕ್ರಮವನ್ನು ರಾಜ್ಯ ಸರಕಾರ ಹೊರಡಿಸಿದೆ. ಅದರಂತೆ ಕೊಡಗು ಜಿಲ್ಲಾಧಿಕಾರಿ ಸೋಮಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದ್ದಾರೆ.

ಅಲ್ಲದೇ ಐಎನ್‌ಎಸ್‌ಎಸಿಒಜಿ (ಇಂಡಿಯನ್ ಎಸ್‌ಎಆರ್‌ಎಸ್-ಸಿಒವಿ-೨ ಜಿನಾಮಿಕ್ಸ್ ಕನ್ಸರ್‌ಟಿಯಮ್) ಕೋವಿಡ್-೧೯ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಪೂರ್ಣ ಜೀನೋಮ್ ಅನುಕ್ರಮಣಿಕೆಯ ಪ್ರಯೋಗಾಲಯಗಳ ಒಕ್ಕೂಟವು ಕೋವಿಡ್-೧೯ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರವು ಪ್ರಸ್ತುತ ಕೇರಳದ ಕೆಲವು ಜಿಲ್ಲೆಗಳಲ್ಲಿ ವರದಿಯಾಗಿದೆ ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಸರ್ಕಾರವು ಕೇರಳ ರಾಜ್ಯದಲ್ಲಿ ಕೋವಿಡ್-೧೯ ಪರಿಸ್ಥಿತಿಯನ್ನು ಅವಲೋಕಿಸಿ ಕೇರಳ ರಾಜ್ಯಕ್ಕೆ ಹೊಂದಿಕೊAಡಿರುವ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಿಶೇಷ ಕಣ್ಗಾವಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿರುವುದರಿಂದ ವಿಶೇಷ ಕಣ್ಗಾವಲು ಕ್ರಮಗಳನ್ನು ಅನುಸರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆದೇಶದಲ್ಲಿ ಸೂಚಿಸಿದ್ದಾರೆ.

ನೆಗೆಟಿವ್ ವರದಿ ಕಡ್ಡಾಯ

ವಿಮಾನ, ಬಸ್, ಟ್ಯಾಕ್ಸಿ, ಸ್ವಂತ ವಾಹನ, ಮತ್ತಿತರ ಮೂಲಕ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ೭೨ ಗಂಟೆಗಳಿಗಿAತ ಹಳೆಯದಲ್ಲದ ಕೋವಿಡ್-೧೯ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯೊಂದಿಗೆ ಆಗಮಿಸಬೇಕು. ಕೋವಿಡ್-೧೯ ಮಾರ್ಗಸೂಚಿ ಯಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ರೋಗ ಲಕ್ಷಣ ಪ್ರಕರಣಗಳ ನಿಗಾವಹಿಸುವಿಕೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.

ಬಸ್‌ಗಳ ಮೂಲಕ ಪ್ರಯಾಣಿಸುವವರು ೭೨ ಗಂಟೆಗಳಿಗಿAತ ಹಳೆಯದಲ್ಲದ ಕೋವಿಡ್-೧೯ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ಆಯಾಯ ಬಸ್‌ನ ನಿರ್ವಾಹಕರು ಖಚಿತಪಡಿಸಿಕೊಳ್ಳಬೇಕು.

(ಮೊದಲ ಪುಟದಿಂದ) ಕೇರಳ ರಾಜ್ಯಕ್ಕೆ ಹೊಂದಿಕೊAಡಿರುವ ಕೊಡಗು ಜಿಲ್ಲೆಯ ಗಡಿ ಭಾಗಗಳ ಮೂಲಕ ಜಿಲ್ಲೆಗೆ ಪ್ರವೇಶಿಸುವ ವಾಹನಗಳಿಗೆ (ಚಾಲಕರು, ಪ್ರಯಾಣಿಕರು, ಸಹಾಯಕರು, ಕ್ಲೀನರ್) ತಿಳಿಸಿರುವ ನಿಯಮಗಳ ಅನುಪಾಲನೆಗೆ ಚೆಕ್‌ಪೋಸ್ಟ್ಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶದಲ್ಲಿ ತಿಳಿಸಿದ್ದಾರೆ.

ಕೇರಳದಿಂದ ಕೊಡಗು ಜಿಲ್ಲೆಗೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ-ವ್ಯವಹಾರ ಸೇರಿದಂತೆ ಇತರೆ ಕಾರಣಗಳಿಗೆ ದಿನನಿತ್ಯ ಭೇಟಿ ನೀಡುವ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿ ೧೫ ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ನೆಗೆಟಿವ್ ಪರೀಕ್ಷೆ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ವಿನಾಯಿತಿ: ಆರ್‌ಟಿಪಿಸಿಆರ್ ನೆಗೆಟಿವ್ ಪರೀಕ್ಷೆ ವರದಿಯನ್ನು ಹೊಂದಿದವರಿಗೆ ವಿನಾಯಿತಿ ನೀಡಲಾಗಿದೆ. ಕೋವಿಡ್-೧೯ ಲಸಿಕೆಯ ಎರಡು ಡೋಸ್ ಪಡೆದಿರುವ ಕುರಿತು ಪ್ರಮಾಣ ಪತ್ರವನ್ನು ಹೊಂದಿರುವುದು. ಸಾಂವಿಧಾನಿಕ ಕಾರ್ಯಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ತುರ್ತು ಸಂದರ್ಭಗಳಲ್ಲಿ (ಕುಟುಂಬದಲ್ಲಿ ಮರಣ ಸಂಭವಿಸಿದ ಸಂದರ್ಭ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ) ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ಸ್ವಾö್ಯಬ್ ಮಾದರಿಗಳನ್ನು ಪರೀಕ್ಷೆಗಾಗಿ ಕೊಡಗು ಜಿಲ್ಲೆಯಲ್ಲಿಯೇ ಸಂಗ್ರಹಿಸಬೇಕು. ಈ ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತಿತರ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದ ಮೇಲೆ ಪಡೆಯತಕ್ಕದ್ದು. ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ೨೦೨೦, ವಿಪತ್ತು ನಿರ್ವಹಣಾ ಕಾಯ್ದೆ ೨೦೦೫, ಭಾರತ ದಂಡ ಸಂಹಿತೆಯಡಿ ಅನ್ವಯವಾಗಬಹುದಾದ ಕಾನೂನು ಕ್ರಮಗಳು ಮತ್ತು ಇತರ ಕಾನೂನು ಉಪಬಂಧಗಳಡಿಯಲ್ಲಿ ಕಾನೂನು ಕ್ರಮಗಳಿಗೆ ಒಳಪಡುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಆದೇಶದಲ್ಲಿ ಎಚ್ಚರಿಸಿದ್ದಾರೆ.