ವರದಿ - ವನಿತಾ ಚಂದ್ರ ಮೋಹನ್

ಕುಶಾಲನಗರ, ಜು.೧೩ : ಕೊಡಗು ಸೇರಿದಂತೆ ನೆರೆಯ ಜಿಲ್ಲೆಗಳು ಅನ್ ಲಾಕ್ ಆಗುತ್ತಿದ್ದಂತೆ ಕುಶಾಲನಗರ ಪಟ್ಟಣ ಬಹುತೇಕ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು, ಹೊಟೇಲ್, ಲಾಡ್ಜ್ ಗಳು ಇನ್ನಷ್ಟೇ ಚೇತರಿಸಿ ಕೊಳ್ಳುತ್ತಿರುವ ಬೆಳವಣಿಗೆ ಕಂಡುಬರುತ್ತಿದೆ.

ಈ ನಡುವೆ ಕಳೆದ ೨೦೧೮ ರಿಂದ ಪ್ರವಾಹ ಸಂತ್ರಸ್ತರಾದ ಜನರು ಮಾತ್ರ ಮತ್ತೆ ಆತಂಕದ ಛಾಯೆಯಲ್ಲಿ ಮತ್ತೆ ದಿನ ದೂಡುತ್ತಿರುವುದು ಗೋಚರಿಸಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಜಲಾವೃತಗೊಂಡ ತಮ್ಮ ಮನೆಗೆ ಈ ಬಾರಿಯೂ ನೀರು ನುಗ್ಗುವ ಭೀತಿ ಎದುರಿಸುತ್ತಿದ್ದಾರೆ. ಕುಶಾಲನಗರ ಪಟ್ಟಣದ ಸುತ್ತಲೂ ಒಂದೆಡೆ ಕಾವೇರಿ ನದಿ ಹರಿಯುತ್ತಿದ್ದು, ಇನ್ನೊಂದೆಡೆ ಹಾರಂಗಿ ನದಿಗಳ ಪ್ರವಾಹದ ಆತಂಕ ಜನರಲ್ಲಿ ಮನೆ ಮಾಡಿದೆ. ಸತತ ಮೂರು ವರ್ಷಗಳಿಂದ ಈ ವ್ಯಾಪ್ತಿಯ ೧೫೦೦ಕ್ಕೂ ಅಧಿಕ ಮನೆಗಳು ಜಲಾವೃತಗೊಳ್ಳುತ್ತಿದ್ದು ಇದನ್ನು ತಪ್ಪಿಸಲು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನದಿಯಿಂದ ಹೂಳೆತ್ತುವ ಮತ್ತು ನದಿ ನಿರ್ವಹಣೆ ಕೆಲಸ ನಡೆದಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದಲ್ಲಿ ಈ ಅನಾಹುತ ಮತ್ತೆ ಮರುಕಳಿಸಬಹುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳದ್ದಾಗಿದೆ.

ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮೂಲಕ ಸ್ಥಳೀಯ ಪ್ರವಾಹ ಸಂತ್ರಸ್ತರ ವೇದಿಕೆ ಕಾವೇರಿ ನದಿ ನಿರ್ವಹಣೆ ಮಾಡಲು ಮನವಿ ಸಲ್ಲಿಸಿದ ಹಿನ್ನೆಲೆ ಕುಶಾಲನಗರ ಪಟ್ಟಣದ ಕೆಲವೆಡೆ ನದಿ ಹೂಳೆತ್ತುವ ಕಾಮಗಾರಿ ನಡೆದಿದ್ದು ಇದರಿಂದ ಬಡಾವಣೆ ಜನತೆ ಅಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಯೋಜನೆ ರೂಪಿಸುವ ಬಗ್ಗೆ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ರಂಜನ್ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ ಚಂದ್ರಮೋಹನ್ ತಿಳಿಸಿದ್ದಾರೆ. ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹಮಟ್ಟ ಏರಿಕೆಯಾಗುತ್ತಲೇ ಅದನ್ನು ನದಿಗೆ ಹಂತ ಹಂತವಾಗಿ ಹರಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ಮತ್ತೆ ಪ್ರವಾಹ ಮರುಕಳಿಸದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಕುಶಾಲನಗರ ಪಟ್ಟಣ ಪಂಚಾಯಿತಿ ತನ್ನ ವ್ಯಾಪ್ತಿಗೆ ಬರುವ ೧೦ಕ್ಕೂ ಅಧಿಕ ಬಡಾವಣೆ ನಾಗರಿಕರಿಗೆ ತಗ್ಗು ಪ್ರದೇಶಗಳಿಂದ ಜನತೆ ಸ್ಥಳಾಂತರಗೊಳ್ಳುವAತೆ ಎರಡು ಬಾರಿ ನೋಟೀಸು ನೀಡಿದ್ದು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಇದೇ ರೀತಿ ಮುಳ್ಳುಸೋಗೆ, ಕೂಡ್ಲೂರು, ಕೂಡಿಗೆ, ಕಣಿವೆ ಮತ್ತು ನೆರೆಯ ಕೊಪ್ಪ ಗ್ರಾಮ ವ್ಯಾಪ್ತಿಯ ನಿವಾಸಿಗಳಿಗೂ ಪ್ರವಾಹ ಹಿನ್ನೆಲೆಯಲ್ಲಿ ಸೂಕ್ತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವAತೆ ನೋಟೀಸಿನಲ್ಲಿ ತಿಳಿಸಲಾಗಿದೆ. ಕೊರೊನಾದಿಂದ ಮನೆಯಲ್ಲೇ ಇದ್ದು ಅದರಿಂದ ಹೊರಬಂದು ಇದೀಗ ಮತ್ತೆ ಮನೆಬಿಟ್ಟು ತೆರಳುವ ಚಿಂತೆಯಲ್ಲಿ ಈ ಭಾಗದ ಸುಮಾರು ೧೫೦೦ಕ್ಕೂ ಅಧಿಕ ಮನೆಗಳ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ಮನೆ ಮುಳುಗಡೆಯಾ ಗುತ್ತಿರುವ ಕಾರಣ ಶೇ. ೯೦ರಷ್ಟು ಮನೆ ಮಾಲೀಕರು ಮನೆಯ ನಿರ್ವಹಣೆ ಕೆಲಸ ಮಾಡದೇ ಈ ಸಾಲಿನ ಮಳೆಗಾಲದ ಪರಿಸ್ಥಿತಿಯನ್ನು ಕಾದು ನೋಡುವ ಮನಸ್ಥಿತಿಯಲ್ಲಿ ದಿನದೂಡುತ್ತಿರುವುದು ಪ್ರಸಕ್ತ ಬೆಳವಣಿಗೆೆಯಾಗಿದೆ.

ಈ ಸಾಲಿನಲ್ಲಿ ಕಳೆದ ಮೂರು ವರ್ಷಗಳ ಸಮಸ್ಯೆ ಮರುಕಳಿಸು ವುದಿಲ್ಲ ಎನ್ನುವ ಮಾಹಿತಿಯನ್ನು ಹಿರಿಯ ಭೂವಿಜ್ಞಾನಿ ಡಾ. ಹೆಚ್ ಎಸ್ ಎಂ ಪ್ರಕಾಶ್ ನೀಡಿದ್ದಾರೆ. ಈ ಬಾರಿಯ ಸೆಪ್ಟೆಂಬರ್ ತನಕ ಮುಂಗಾರು ಅವಧಿಯಲ್ಲಿ ಸಾಧಾರಣ ಮಳೆ ಸುರಿಯಲಿದೆ; ಈ ಹಿಂದೆ ನಡೆದ ಘಟನೆಗಳು ಕೊಡಗು ಮತ್ತು ಕೇರಳ ಪ್ರಾಂತ್ಯದಲ್ಲಿ ಮರುಕಳಿಸುವುದಿಲ್ಲ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಅವರು ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿ ೨೦೧೮ರಿಂದ ನಡೆದ ಕೆಲವು ವಿಶೇಷ ಅಪರೂಪದ ಭೂವೈಜ್ಞಾನಿಕ ಘಟನೆಗಳು ಮತ್ತು ಆವಿ ಮೂಲಗಳು ಈ ವರ್ಷ ಸಕ್ರಿಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಬಾರಿ ಹವಾಮಾನ ದುರಂತಗಳು ವಿರಳವಾಗಿರಲಿವೆ ಎಂದು ಹೇಳಿದ್ದಾರೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕುಶಾಲನಗರ ಪಟ್ಟಣದ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಪ್ರವಾಹ ಸಂತ್ರಸ್ತರ ವೇದಿಕೆಯ ಮನವಿಯಂತೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮೂಲಕ ನದಿ ನಿರ್ವಹಣೆ ಕಾಮಗಾರಿ ನಡೆದಿದೆ. ಪ್ರವಾಹ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಲು ಮಾದಾಪಟ್ಟಣ ಭಾಗದಿಂದ ಕೂಡಿಗೆ ತನಕ ತಡೆಗೋಡೆ ನಿರ್ಮಾಣ ಮತ್ತು ನದಿಯಿಂದ ಮರಳು, ಹೂಳೆತ್ತುವ ಕಾಮಗಾರಿಗೆ ಯೋಜನೆ ರೂಪಿಸು ವಂತೆ ಮನವಿ ಮಾಡಲಾಗಿದೆ ಎಂದು ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಉಪಾಧ್ಯಕ್ಷ ತೋರೆರ ಉದಯ ಕುಮಾರ್ ತಿಳಿಸಿದ್ದಾರೆ.