ಸುಂಟಿಕೊಪ್ಪ, ಜು. ೧೧: ೭ನೇ ಹೊಸಕೋಟೆ, ತೊಂಡೂರು ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿ
ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿದೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗುತ್ತಿದೆ ಎಂದು ಅಳಲನ್ನು ವ್ಯಕ್ತಪಡಿಸಿದ್ದಾರೆ.
ದಿನಂಪ್ರತಿ ವಿಕ್ರಂ ಎಂಬವರ ತೋಟಕ್ಕೆ ೩ ರಿಂದ ೪ ಕಾಡಾನೆಗಳ ಹಿಂಡು ಆಹಾರ ಅರಸಿ ತೋಟದಲ್ಲಿ ಬೆಳೆದ ಬಾಳೆ, ತೆಂಗು ಇನ್ನಿತರ ಕೃಷಿ ಫಸಲುಗಳನ್ನು ತಿಂದು ಕಾಫಿ, ಕರಿಮೆಣಸು ಬಳ್ಳಿಗಳನ್ನು ಧ್ವಂಸಗೊಳಿಸುತ್ತಿದ್ದು ಇದರಿಂದ ರೂ. ೨೫ ರಿಂದ ೩೦ ಸಾವಿರ ನಷ್ಟ ಉಂಟಾಗಿದೆ ಎಂದು ಕೃಷಿಕ ವಿಕ್ರಂ ತಿಳಿಸಿದ್ದಾರೆ.
ಸುತ್ತಮುತ್ತಲಿನ ಕಾಫಿ ತೋಟ ಹಾಗೂ ಭತ್ತದ ಕೃಷಿ ಗದ್ದೆಗಳಿಗೆ ಕೃಷಿ ಫಸಲನ್ನು ತಿಂದು ನಾಶಗೊಳಿಸುತ್ತಿದೆ. ಕಾಫಿ ತೋಟಗಳಲ್ಲಿ ಫಸಲು ಭರಿತ ಕಾಫಿಗಿಡಗಳನ್ನು ಧ್ವಂಸಗೊಳಿಸುತ್ತಿದೆ. ಕಾಡಾನೆ ಹಾವಳಿಯ ಬಗ್ಗೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರೂ ಇಲಾಖೆಯವರು ಸ್ಪಂದಿಸುತ್ತಿಲ್ಲ. ಕಾಡಾನೆಯನ್ನು ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಈ ಭಾಗದ ಕೃಷಿಕರು ಆರೋಪಿಸಿದ್ದಾರೆ.