ಕೂಡಿಗೆ, ಜು. ೧೦: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅಧೀನಕ್ಕೆ ಒಳಪಡುವ ಕೃಷಿ ಇಲಾಖೆಯ ಜಮೀನಿನಲ್ಲಿ ಭತ್ತ ನಾಟಿ ಕೆಲಸ ಮಾಡಲು ಇಲಾಖೆಯ ವತಿಯಿಂದ ಸಿದ್ಧತೆ ನಡೆಯುತ್ತಿದೆ.

ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ೨೦ ಎಕರೆಗಳಷ್ಟು ಪ್ರದೇಶದಲ್ಲಿ ವರ್ಷಂಪ್ರತಿಯAತೆ ಈ ಬಾರಿಯೂ ಅಲ್ಲಿನ ಗದ್ದೆಗಳಿಗೆ ಭತ್ತ ನಾಟಿ ಮಾಡಲು ಭತ್ತ ಸಸಿಮಡಿಗಳನ್ನು ಸಿದ್ಧಮಾಡಿ ಅದರ ಜೊತೆಯಲ್ಲಿ ಹಾರಂಗಿ ನದಿಯಿಂದ ಪಂಪ್‌ಸೆಟ್ ಮೂಲಕ ನೀರನ್ನು ಹಾಯಿಸಿಕೊಂಡು ೨೦ ಎಕರೆಗಳಷ್ಟು ಪ್ರದೇಶದ ಗದ್ದೆಗಳನ್ನು ಉಳುಮೆ ಮಾಡಿ ನಾಟಿ ಕಾರ್ಯಕ್ಕೆ ಹದಮಾಡಲಾಗುತ್ತಿದೆ.

ಕೂಡಿಗೆಯಲ್ಲಿರುವ ಕೃಷಿ ಜಮೀನಿನಲ್ಲಿ ಬೀಜೋತ್ಪಾದನೆಗೆ ಅನುಕೂಲವಾಗಲು ಸರಕಾರ ನಿಯಮಗಳ ಅನುಸಾರವಾಗಿ ಕೃಷಿ ಇಲಾಖೆಯ ವತಿಯಿಂದ ವರ್ಷಂಪ್ರತಿಯAತೆ ಈ ಬಾರಿಯೂ ಕೊಡಗಿನ ಹವಾಮಾನಕ್ಕೆ ಅನುಗುಣವಾಗಿ ತುಂಗಾ ಐಇಟಿ ೧೩೯೦೧ ಎಂಬ ಹೈಬ್ರೀಡ್ ಭತ್ತದ ತಳಿಯನ್ನು ಸಸಿ ಮಡಿಗೆ ಬಿತ್ತನೆ ಮಾಡಲಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಸಸಿಗಳನ್ನು ೨೦ ಎಕರೆ ಪ್ರದೇಶಕ್ಕೆ ೪ ಹಂತಗಳ ನಾಟಿ ಕಾರ್ಯವನ್ನು ಮಾಡಲಾಗುವುದು ಎಂದು ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ಮಾದರಾವ್ ತಿಳಿಸಿದ್ದಾರೆ.

ತುಂಗಾ ಬೆಳೆಯು ದೀರ್ಘಾವಧಿ ಬೆಳೆಯಾಗಿದ್ದು ಉತ್ತಮವಾದ ಬೆಳೆಯಾಗಿದೆ. ಭತ್ತ ಮತ್ತು ಹುಲ್ಲು ದೊರಕುತ್ತದೆ. ಅಲ್ಲದೆ ಎಕರೆಗೆ ೨೦ಕ್ಕೂ ಹೆಚ್ಚು ಕ್ವಿಂಟಾಲ್ ಇಳುವರಿ ಬರುತ್ತದೆ. ರಾಜ್ಯ ಮತ್ತು ಜಿಲ್ಲೆಯಲ್ಲಿ ತುಂಗಾ ಭತ್ತದ ಬೀಜಕ್ಕೆ ಹೆಚ್ಚು ಬೇಡಿಕೆ ಇದೆ. ಈ ತುಂಗಾ ಭತ್ತದ ಬೀಜವು ಬೆಂಕಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅಲ್ಲದೆ ಬೆಳೆ ಹೆಚ್ಚು ಬೆಳೆದಾಗ ಭತ್ತ ಉದುರುವಿಕೆಯ ಪ್ರಮಾಣ ಕಡಿಮೆ ಇರುತ್ತದೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

ಕೂಡಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಜಮೀನಿನಲ್ಲಿ ಬೆಳೆದ ತುಂಗಾ ಭತ್ತವನ್ನು ಇಲಾಖೆಯ ನಿಯಮದಂತೆ ಕರ್ನಾಟಕ ರಾಜ್ಯ ಬೀಜ ನಿಗಮ, ಮೈಸೂರು ಇವರಿಗೆ ಕಳುಹಿಸಲಾಗುವುದು. ನಿಗಮವು ನಿಯಮಬದ್ಧವಾಗಿ ಭತ್ತದ ಬೀಜಗಳನ್ನು ಪರೀಕ್ಷಿಸಿ ನಂತರ ಸಂಸ್ಕರಣೆ ಮಾಡಿ ಬೆಂಗಳೂರಿನ ಕೃಷಿ ತಂತ್ರಜ್ಞಾನ ನೋಂದಣಿ ಅನುಮತಿ ಮೇರೆಗೆ ೨೫ ಕೆ.ಜಿ. ಪ್ಯಾಕ್‌ಗಳನ್ನು ಮಾಡಿ ನಂತರ ಕೊಡಗಿನಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಜಿಲ್ಲೆಯ ಸಹಕಾರ ಸಂಘಗಳ ಮೂಲಕ ರೈತರಿಗೆ ಸರಕಾರ ನಿಗದಿ ಮಾಡಿದ ದರದಲ್ಲಿ ಬಿತ್ತನೆಗೆ ವಿತರಣೆ ಮಾಡಲಾಗು ವುದು ಎಂದು ತಿಳಿಸಿದ್ದಾರೆ.

ಈ ಸಾಲಿನಲ್ಲಿ ೨೦ ಎಕರೆ ಪ್ರದೇಶದಲ್ಲಿ ನಾಟಿ ಮಾಡಲು ಮಳೆಯ ಪ್ರಮಾಣ ಈ ಭಾಗದಲ್ಲಿ ಕಡಿಮೆ ಇರುವ ಕಾರಣ ಭತ್ತದ ನಾಟಿಗೆ ಸಮೀಪದ ಹಾರಂಗಿ ನದಿಯ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

- ಕೆ.ಕೆ. ನಾಗರಾಜಶೆಟ್ಟಿ.