ಮಡಿಕೇರಿ, ಜು.೧೦: ಲಾಕ್‌ಡೌನ್ ಕಾರಣಕ್ಕಾಗಿ ಕಾರ್ಮಿಕ ಕಲ್ಯಾಣ ಯೋಜನೆಯಡಿ ಕಾರ್ಮಿಕ ಇಲಾಖೆ ಮೂಲಕ ನೀಡುತ್ತಿರುವ ಪರಿಹಾರ ಧನ ಮತ್ತು ಅಗತ್ಯ ನೆರವಿನ ಕಿಟ್ ಅರ್ಹರಲ್ಲ ದವರ ಪಾಲಾಗುವುದನ್ನು ತಪ್ಪಿಸಬೇಕೆಂದು ಕಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.
ಇಂದು ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನಡೆದ ಕಿಟ್ ವಿತರಣಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ. ಬೋಪಯ್ಯ ಅವರ ಎದುರು ಕಾರ್ಮಿಕ ಸಂಘಟನೆಗಳ ಪ್ರಮುಖರು ಇಲಾಖೆಯ ನ್ಯೂನತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ಧನ ಮತ್ತು ಕಿಟ್ ವಿತರಣಾ ಪಟ್ಟಿಯಲ್ಲಿ ಸಿದ್ದಾಪುರದ ಪತ್ರಕರ್ತರೊಬ್ಬರ ಹೆಸರು ಸೇರಿಕೊಂಡಿದೆ. ಪತ್ರಕರ್ತರು ಕಾರ್ಮಿಕ ಕಲ್ಯಾಣ ಕಾರ್ಯಕ್ರಮದಡಿ ಬರುತ್ತಾರೆಯೇ ಎಂದು ಪ್ರಶ್ನಿಸಿದರು.
ಪ್ರತಿನಿತ್ಯ ಕಷ್ಟಪಟ್ಟು ದುಡಿಯುವ ಅರ್ಹ ಕಾರ್ಮಿಕರಿಗೆ ಎರಡೆರಡು ಕಿಟ್ ಗಳನ್ನು ಬೇಕಾದರೆ ನೀಡಿ, ಆದರೆ ಕಾರ್ಮಿಕರಲ್ಲದವರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ನೀಡಬಾರದೆಂದು ಕಾರ್ಮಿಕ ಮುಖಂಡರುಗಳಾದ ಅನಿಲ್ ಕುಟ್ಟಪ್ಪ ಹಾಗೂ ಹೆಚ್.ಬಿ. ರಮೇಶ್ ಒತ್ತಾಯಿಸಿದರು.
ಈ ಬಗ್ಗೆ ಶಾಸಕರು ಸ್ಪಷ್ಟನೆ ಬಯಸಿದಾಗ ಉತ್ತರಿಸಿದ ಕಾರ್ಮಿಕ ಅಧಿಕಾರಿ ಜಯಣ್ಣ, ಆನ್‌ಲೈನ್ ಮೂಲಕವೇ ಪರಿಹಾರ ಧನದ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಕಾರ್ಮಿಕರಿಗೆ ಆನ್‌ಲೈನ್ ಮೂಲಕವೇ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ನಮ್ಮ ಪಾತ್ರವೇನು ಇಲ್ಲವೆಂದು ತಿಳಿಸಿದರು.
ಕಾರ್ಮಿಕ ಮುಖಂಡರು ಮಾತನಾಡಿ ಸಿದ್ದಾಪುರ ಭಾಗದಲ್ಲಿ ಸೈಬರ್ ಸೆಂಟರ್‌ಗಳು ತಲೆ ಎತ್ತಿವೆ, ಕಾರ್ಮಿಕರಲ್ಲದವರು ಕೂಡ ಕಾರ್ಮಿಕರು ಎಂದು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯಗುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರ ನೀಡುತ್ತಿರುವ ರೂ.೩ ಸಾವಿರ ಪರಿಹಾರ ಮತ್ತು ಕಿಟ್ ದುರುಪಯೋಗವಾಗಬಾರದು. ಈ ಬಗ್ಗೆ ಶಾಸಕರು ಸೂಕ್ತ ಆದೇಶ ನೀಡಬೇಕೆಂದು ಮನವಿ ಮಾಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಬೋಪಯ್ಯ ಮಾತನಾಡಿ ಅರ್ಹರಲ್ಲದವರನ್ನು ಕೈಬಿಡಬೇಕು ಮತ್ತು ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಗಣಪತಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಈ ಸಂದರ್ಭ ಹಾಜರಿದ್ದರು.