ಕೂಡಿಗೆ, ಜು. ೧೦: ಕುಶಾಲನಗರ ಹೊಸ ತಾಲೂಕು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ಜಾಗ ಮಂಜೂರಾತಿಗಾಗಿ ಮನವಿ ಸಲ್ಲಿಸಲಾಯಿತು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ವ್ಯಾಪ್ತಿಯ ಸರ್ವೆ ನಂಬರ್ ೧೧.೬ ಏಕರೆಗಳಷ್ಟು ಪ್ರದೇಶವಿದ್ದು, ಆ ಜಾಗವನ್ನು ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಜಾಗವನ್ನು ಕಂದಾಯ ಇಲಾಖೆ ಮೂಲಕ ಮಂಜೂರು ಮಾಡಬೇಕೆಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಮನವಿ ಮಾಡಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕೈಗಾರಿಕಾ ಘಟಕಗಳು ಇದ್ದು, ನೂರಾರು ವಸತಿ ರಹಿತರು ಇದ್ದು, ಕಳೆದ ೨೫ ವರ್ಷಗಳಿಂದಲೂ ನಿವೇಶನ ಇಲ್ಲದೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಮನೆ ಬೇಡಿಕೆ ಇರುವುದರಿಂದ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವಂತೆ ಕಂದಾಯ ಸಚಿವರಿಗೆ ಮನವಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅವರ ನೇತೃತ್ವದಲ್ಲಿ ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತಿತರು ಇದ್ದರು.