ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಪಶ್ಚಿಮಘಟ್ಟಗಳ ಸಾಲಿನ ಬ್ರಹ್ಮಗಿರಿಯ ತಪ್ಪಲಿನಲ್ಲಿ ಕಾವೇರಿ ನದಿಯಾಗಿ ಹುಟ್ಟುತ್ತಾಳೆ, ಕೊಡಗಿನ ಪಡುವಣಭಾಗದ ಈ ಬೆಟ್ಟ ಸಾಲನ್ನು ಸಹ್ಯಾದ್ರಿಪರ್ವತಾವಳಿ ಎಂದು ಹೇಳುತ್ತಾರೆ. ಕಾವೇರಿಯು ಇಲ್ಲಿ ನದಿರೂಪ ತಳೆದು ಹರಿಯತೊಡಗಿದುದ ರಿಂದ ಅವಳಿಗೆ ಸಹ್ಯಜೆ, ಸಹ್ಯಾಚಲೇಂದ್ರತನಯೆ ಎಂಬ ಹೆಸರುಗಳೂ ಕೂಡಿ ಬಂದಿವೆ.

ಕಾವೇರಿ ನದಿಯ ಬುಡದ ಸ್ಥಳವಾದುದರಿಂದ ನದಿಯ ಉಗಮ ಕ್ಷೇತ್ರವನ್ನು ತಲಕಾವೇರಿ ಎಂದು ಕರೆಯ ಲಾಗಿದೆ. ಇದು ಪಾವನ ನದಿ; ಕಾವೇರಿಯ ಉದ್ಭವಸ್ಥಳ ಆಗಿರುವುದರ ಜೊತೆಗೆ ಪ್ರಕೃತಿ ಸೌಂದರ್ಯದ ನೆಲೆವೀಡೂ ಆಗಿರುತ್ತದೆ. ಬ್ರಹ್ಮಗಿರಿ, ಅಗ್ನಿಗಿರಿ, ವಾಯುಗಿರಿ, ಗಜರಾಜಗಿರಿ ಎಂಬ ಪರ್ವತಗಳ ಮಧ್ಯೆ ತಲಕಾವೇರಿಯು ನೆಲೆಗೊಂಡಿರುತ್ತದೆ. ಪ್ರಾಕೃತಿಕ ಸೌಂದರ್ಯದ ಆ ತಾಣದಲ್ಲಿ ಒಂದು ವಿಶಾಲವಾದ ಕೆರೆ ಇದೆ. ಅದರ ಬದಿಯಲ್ಲಿ ಒತ್ತಾಗಿ ಪುಟ್ಟದಾದ ಒಂದು ಪುಷ್ಕರಿಣಿ. ಅದೇ ಕಾವೇರಿಯ ಉಗಮಸ್ಥಾನ. ಅದರ ಎದುರಿನ ದೊಡ್ಡದಾದ ತಟಾಕವೇ ಕಾವೇರಿ ಸ್ನಾನ ಸರೋವರ. ಬ್ರಹ್ಮಕುಂಡಿಕೆ ಎಂದು ಪುಟ್ಟ ಪುಷ್ಕರಿಣಿಯ ಪುರಾಣಪ್ರಸಿದ್ಧಿಯ ಹೆಸರು. ಮಹರ್ಷಿ ಅಗಸ್ತö್ಯರ ಕಮಂಡಲುವಿನಿAದ ಕಾವೇರಿಯು ಪುಣ್ಯವಾಹಿನಿಯಾಗಿ ಬ್ರಹ್ಮಕುಂಡಿಕೆಗೆ ಪ್ರವಹಿಸಿ ಅಲ್ಲಿಂದ ಮುಂದಿನ ದೊಡ್ಡ ಕೊಳಕ್ಕೆ ಹರಿಯುತ್ತಾಳೆ. ದೊಡ್ಡ ಕೆರೆಯ ಸನಿಹದಲ್ಲಿಯೇ ಕೆರೆಕಟ್ಟೆಯ ಮೇಲಿನ ಗೋಡೆಯ ಇನ್ನೊಂದು ಬದಿಯಲ್ಲಿ ಚಿಕ್ಕದಾದ ಒಂದು ಕೊಳ. ದೊಡ್ಡ ಕೊಳದಿಂದ ಕಾವೇರಿ ಅಲ್ಲಿಗೆ ಹರಿಯುತ್ತಾಳೆ. ಆಮೇಲೆ ಅವಳು ಅಲ್ಲೇ ಮುಂದೆ ಕಾಣುವ ಕಾಡಿನ ಒಳಗೆ ಗುಪ್ತಗಾಮಿನಿಯಾಗಿ ಸಾಗಿ ಮುಂದುವರಿಯುತ್ತಾಳೆ. ಚಿಕ್ಕ ಕೊಳದಿಂದ ಕಾಡಿಗಾಗಿ ಕಾವೇರಿ ಗುಪ್ತಗಾಮಿನಿಯಾಗಿ ಸಾಗುವ ದೂರ ಬಹಳವೇನಿಲ್ಲ. ಕಾಡಿನ ಒಂದೆಡೆಯಿAದ ಬೆಟ್ಟದ ಬುಡದಲ್ಲಿ ಕಿರಿದಾಗಿ ಕಾವೇರಿ ಹರಿಯ ತೊಡಗಿರುವುದು ಕಾಣುತ್ತದೆ. ಅಲ್ಲಿಂದಲೂ ಮುಂದೆ ಇಳಿದು ಗುಡ್ಡಕಾಡುಗಳನ್ನು ಹಾದು ಸ್ವಲ್ಪ ದೂರ ಹೋದರೆ ಕಾವೇರಿ ಸರಿಯಾಗಿ ನದಿರೂಪ ತಳೆದು ಸಾಗುತ್ತಿರುವುದು ಕಾಣುತ್ತದೆ. ಅಷ್ಟಾಗುವಾಗ ಕಾವೇರಿಯು ತಲಕಾವೇರಿಯಿಂದ ಸುಮಾರು ಒಂದೂವರೆ ಕಿಲೋಮೀಟರಿನಷ್ಟು ದೂರ ಹರಿದು ಬಂದAತಾಗಿರುತ್ತದೆ. ಮುಂದೆ ಸುಮಾರು ಮೂರು ಕಿಲೋಮೀಟರಿನಷ್ಟು ಹರಿದು ಹೋದಂತೆ ಕಾವೇರಿಯು ತುಂಬಾ ದಟ್ಟವಾದ ಬೆಟ್ಟ, ಕಾಡುಗಳನ್ನು ದಾಟಿ ಕಲ್ಲುಬಂಡೆಗಳ ಮಧ್ಯೆ ಸರಿದು ಇಳಿಯುತ್ತಾಳೆ. ಈ ಸ್ಥಳವನ್ನು ನಾಗತೀರ್ಥ ಎಂದು ಕರೆಯುತ್ತಾರೆ. ಅಲ್ಲಿಂದ ಮುಂದೆ ಕಾವೇರಿಯು ಚೇರಂಗಾಲ ಗ್ರಾಮದಲ್ಲಿ ತನ್ನ ಪಯಣವನ್ನು ಮುಂದುವರಿಸುತ್ತಾಳೆ. ಅಲ್ಲಿ ಅವಳ ದಂಡೆಯಲ್ಲಿ ಶ್ರೀ ಉಮಾಮಹೇಶ್ವರಿ ಸ್ಥಾನವಿದೆ. ಮಹರ್ಷಿ ಅಗಸ್ತö್ಯರು ಇದನ್ನು ಸಂಸ್ಥಾಪಿಸಿದರೆAದು ಪರಂಪರಾಗತವಾಗಿ ಹಿರಿಯರಿಂದ ಕೇಳಿಬಂದ ಸ್ಥಳಮಹಾತ್ಮೆöÊಯಿಂದ ತಿಳಿದು ಬರುತ್ತದೆ.

ಚೇರಂಗಾಲದಿAದ ಮುಂದೆ ಸಾಗುತ್ತಾ ಕಾವೇರಿಯು ಅನತಿ ದೂರದಲ್ಲಿರುವ ಭಾಗಮಂಡಲಕ್ಕೆ ಬಂದು ತಲಪುತ್ತಾಳೆ. ಅಲ್ಲಿ ಅವಳೊಡನೆ ಕನಕೆ, ಸುಜ್ಯೋತಿ ಎರಡು ನದಿಗಳು ಸಂಗಮವಾಗಿ ಆ ಕ್ಷೇತ್ರವು ತ್ರಿವೇಣಿಸಂಗಮಕ್ಷೇತ್ರ ಎಂದು ಪ್ರಸಿದ್ಧವಾಗಿರುತ್ತದೆ. ಕನಕೆ ಬ್ರಹ್ಮಗಿರಿಯ ಉತ್ತರಭಾಗದಲ್ಲಿ ಉದ್ಭವಿಸಿ ಹರಿದು ಭಾಗಮಂಡಲಕ್ಕೆ ಬಂದು ಕಾವೇರಿಯನ್ನು ಸೇರುತ್ತಾಳೆ. ಸುಜ್ಯೋತಿಯು ಅಂತರ್ವಾಹಿನಿಯಾಗಿದ್ದು ಕನಕಾ-ಕಾವೇರಿ ಸಂಗಮಸ್ಥಳದಲ್ಲಿ ಕಾವೇರಿಯೊಡನೆ ಕೂಡುತ್ತಾಳೆ. ಮೂರು ನದಿಗಳು ಕೂಡಿ ತ್ರಿವೇಣಿ ಸಂಗಮ ಎಂದಾದುದರಿAದ ಭಾಗಮಂಡಲವು ದಕ್ಷಿಣಪ್ರಯಾಗ ಕ್ಷೇತ್ರ ಎಂದು ಪ್ರಸಿದ್ಧ ಆಗಿರುತ್ತದೆ. ಭಾಗಮಂಡಲದಲ್ಲಿ ತ್ರಿಮೂರ್ತಿಗಳ ಮಂದಿರ, ಪ್ರೇತಾರಣ್ಯ, ತಕ್ಷಕವನ ಇವೆಲ್ಲವಿದ್ದು ಕಾವೇರಿ ದಂಡೆಯಲ್ಲಿ ಮಹತ್ಪçಸಿದ್ಧಿಯನ್ನು ಪಡೆದಿರುವ ಮೊದಲ ಪುಣ್ಯಕ್ಷೇತ್ರ ಇದಾಗಿರುತ್ತದೆ.

ಭಾಗಮಂಡಲದಿAದ ಮುಂದೆ ಕಾವೇರಿಯು ಎರಡೂವರೆ ಕಿ. ಮೀ. ದೂರ ಹರಿದು ಕೋರಂಗಾಲ ಗ್ರಾಮವನ್ನು ಸೇರುತ್ತಾಳೆ. ಅಲ್ಲಿ ನದೀ ತೀರದಲ್ಲಿ ಎತ್ತರದ ಗುಡ್ಡವೊಂದರ ಮೇಲೆ ಶ್ರೀ ಸುಬ್ರಹ್ಮಣ್ಯಸ್ವಾಮಿಯ ದೇವಾಲಯವೊಂದಿದೆ. ಕೋರಂಗಾಲದಿAದ ಮುಂದೆ ಕಾವೇರಿಯು ಹರಿದು ಹೋಗಿ ಹರಿಶ್ಚಂದ್ರ ಸ್ಥಳವನ್ನು ತಲಪುತ್ತಾಳೆ. ಭಾಗಮಂಡಲಕ್ಕೂ, ಇಲ್ಲಿಗೂ ಇರುವ ದೂರ ಸುಮಾರು ಇಪ್ಪತ್ತು ಕಿ.ಲೋ.ಮೀಟರ್‌ಗಳು. ಇಲ್ಲಿ ಹರಿಶ್ಚಂದ್ರೇಶ್ವರಸ್ವಾಮಿಯ ದೇವಾಲಯ ಇದೆ. ಹರಿಶ್ಚಂದ್ರವು ಕಾವೇರಿಯ ಬಲ ಭಾಗದಲ್ಲಿ ದಂಡೆಯ ಮೇಲೆ ಇದ್ದರೆ ಪಾಲೂರು ಗ್ರಾಮದಲ್ಲಿ ಇನ್ನೊಂದು ಪಾವನ ಶಿವಕ್ಷೇತ್ರವು ನದಿಯಿಂದ ಸ್ವಲ್ಪ ದೂರದಲ್ಲಿ ಎಡದಂಡೆಯ ಮೇಲಿದೆ. ಹರಿಶ್ಚಂದ್ರ-ಪಾಲೂರುಗಳನ್ನು ಬಿಟ್ಟು ಕಾವೇರಿ ಮುಂದೆ ಹರಿದು ನಾಪೋಕ್ಲುವಿನ ಬದಿಗಾಗಿ ಸಾಗುತ್ತಾಳೆ. ಅಲ್ಲಿಂದ ಮುಂದೆ ಕೆಲವು ಮೈಲಿಗಳಷ್ಟು ದೂರ ಹರಿದು ಪುರಾಣ ಪ್ರಸಿದ್ಧವಾದ ಬಲಮುರಿ ಕ್ಷೇತ್ರವನ್ನು ತಲಪುತ್ತಾಳೆ. ಅಲ್ಲಿ ಅವಳ ಒಂದು ತೀರದಲ್ಲಿ ಅಗಸ್ತೆö್ಯÃಶ್ವರ, ಇನ್ನೊಂದು ತೀರದಲ್ಲಿ ಮುನೀಶ್ವರ ಎಂಬ ಎರಡು ದೇಗುಲಗಳಿವೆ. ಬಲಮುರಿಯಿಂದ ಮುಂದೆ ಮೂರ್ನಾಡಿಗೆ ಸಮೀಪದ ಬೇತ್ರಿ ಗ್ರಾಮಕ್ಕಾಗಿ ಕಾವೇರಿ ಹರಿದು ಸಾಗುತ್ತಾಳೆ. ಬೇತ್ರಿಯಲ್ಲಿ ಕಾವೇರಿಗೆ ಅಡ್ಡಲಾಗಿ ಬೃಹತ್ ಸೇತುವೆಯಿದೆ. ಅಲ್ಲಿಂದ ಮುಂದೆ ಸುಮಾರು ಇಪ್ಪತ್ತು ಕಿ.ಮೀ.ಗಳಷ್ಟು ದೂರ ಸಾಗಿ ಗುಹ್ಯ ಗ್ರಾಮವನ್ನು ಕಾವೇರಿಯು ತಲಪುತ್ತಾಳೆ. ಗುಹ್ಯದಲ್ಲಿ ಕಾವೇರಿಯ ದಂಡೆಯಲ್ಲಿ ಎತ್ತರದ ನೆಲೆಯಲ್ಲಿ ಶ್ರೀ ಅಗಸ್ತೆö್ಯÃಶ್ವರ ದೇವಾಲಯವಿದೆ. ಅಲ್ಲಿಂದ ಕಾವೇರಿ ಪೂರ್ವಾಭಿಮುಖವಾಗಿ ಸುಮಾರು ಒಂದು ಕಿ. ಲೋಮೀಟರ್ ಸಾಗುವಷ್ಟರಲ್ಲಿ ನೆಲ್ಲಿಹುದಿಕೇರಿ ಗ್ರಾಮವನ್ನು ತಲಪುತ್ತಾಳೆ. ಅಲ್ಲಿ ಅವಳ ತೀರದಲ್ಲಿ ಎಡಭಾಗದಲ್ಲಿ ಶ್ರೀಸತ್ಯನಾರಾಯಣ ದೇವಸ್ಥಾನ ನೆಲೆನಿಂತಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾವೇರಿಗೆ ಅಡ್ಡಲಾಗಿ ಒಂದು ದೊಡ್ಡ ಸೇತುವೆ ಕಟ್ಟಿರುವುದು ಕಾಣುತ್ತದೆ. ಅದೇ ಪ್ರಸಿದ್ಧವಾದ ಸಿದ್ದಾಪುರ ಸೇತುವೆ. ಸೇತುವೆಯಿಂದ ಸಿದ್ದಾಪುರ ಪೇಟೆಗೆ ಮುಕ್ಕಾಲು ಕಿ. ಮೀ. ದೂರವಿದೆ.

ಸಿದ್ದಾಪುರದಿಂದ ಮುಂದಕ್ಕೆ ಕಾವೇರಿ ಹರಿಯುತ್ತಾ, ಹೋಗಿ ನಂಜರಾಯಪಟ್ಟಣವನ್ನು ತಲಪುತ್ತಾಳೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಮುಂದೆ ಇರುವ ಶ್ರೀರಂಗಸಮುದ್ರ ಎಂಬದು ಅವಳ ದಡದಲ್ಲಿ ನೆಲೆಗೊಂಡಿರುವ ಇನ್ನೊಂದು ಊರು. ಅಲ್ಲಿ ಕಾವೇರಿ ಉತ್ತರವಾಹಿನಿಯಾಗಿ ಹರಿಯುತ್ತಾಳೆ. ಶ್ರೀರಂಗಸಮುದ್ರದಲ್ಲಿ ರಂಗನಾಥಸ್ವಾಮಿಯ ದೇಗುಲವೊಂದಿದೆ. ಇಲ್ಲಿ ಚಿಕ್ಲಿ ಹೊಳೆಯು ಕಾವೇರಿ ಒಡನೆ ಜೊತೆಗೂಡುತ್ತದೆ. ಶ್ರೀರಂಗಸಮುದ್ರದಿAದ ಕಾವೇರಿ ಸುಮಾರು ಒಂಬತ್ತು ಕಿ.ಲೋ ಮೀಟರ್‌ಗಳಷ್ಟು ದೂರ ಸಾಗಿ ಕುಶಾಲನಗರವನ್ನು ತಲಪುತ್ತಾಳೆ. ಕುಶಾಲನಗರ ಹಿಂದೆ ಬ್ರಿಟೀಷರು ನಮ್ಮ ದೇಶವನ್ನು ಆಳುತ್ತಿದ್ದ ಕಾಲದಲ್ಲಿ ಫ್ರೇಸರ್‌ಪೇಟೆ ಎಂದು ಪ್ರಸಿದ್ಧವಾಗಿತ್ತು. ಇಲ್ಲಿ ಗಣಪತಿ, ಶಿವ, ಕನ್ನಿಕಾಪರಮೇಶ್ವರಿ ದೇವಾಲಯಗಳು ಇವೆ.

ಕುಶಾಲನಗರದಿಂದ ಕಾವೇರಿಯು ಉತ್ತರವಾಹಿನಿಯಾಗಿ ಮುಂದೆ ಹರಿದು ಸಾಗುತ್ತಾಳೆ. ಹಾಗೆ ಐದು ಕಿಲೋಮೀಟರ್ ದೂರ ಸಾಗಿ ಕೂಡಿಗೆಯನ್ನು ಸೇರುತ್ತಾಳೆ. ಅಲ್ಲಿ ಹಾರಂಗಿ ನದಿಯು ಅವಳೊಡನೆ ಸಂಗಮವಾಗುತ್ತಾಳೆ. ಕೂಡಿಗೆಯಲ್ಲಿ ಶ್ರೀಗೋಪಾಲಕೃಷ್ಣ ಸ್ವಾಮಿ ಆಲಯ, ಶ್ರೀಸುಬ್ರಹ್ಮಣ್ಯ ಮಂದಿರಗಳಿವೆ. ಕೂಡಿಗೆಯಿಂದ ಮುಂದೆ ಮೂರು ಕಿಲೋಮೀಟರ್‌ಗಳಷ್ಟು ದೂರ ಹರಿದಂತೆ ಕಾವೇರಿ ಪುರಾಣಪ್ರಸಿದ್ಧವಾದ ರಾಮಸ್ವಾಮಿ ಕಣಿವೆ ಕ್ಷೇತ್ರವನ್ನು ತಲಪುತ್ತಾಳೆ. ಇಲ್ಲಿ ಶ್ರೀರಾಮೇಶ್ವರ ಸ್ವಾಮಿಯ ದೇವಾಲಯವಿದೆ. ಇಲ್ಲಿ ಕಾವೇರಿಯು ವಿಶಾಲರೂಪ ತಳೆದು ಹರಿಯುವುದನ್ನು ನೋಡುವುದೆಂದರೆ ಕಣ್ಮನಗಳಿಗೆ ಆಪ್ಯಾಯಮಾನವಾದ ಅನುಭವವೇ ಸರಿ.

(ಮುಂದುವರಿಯುವುದು)

(ಸAಗ್ರಹ) : ಎಸ್. ಎಸ್. ಸಂಪತ್‌ಕುಮಾರ್, ಭಾಗಮಂಡಲ.