ಗೋಣಿಕೊಪ್ಪಲು, ಜು.೧೦ : ಹಲವು ವರ್ಷ ಗಳಿಂದ ಕಾವೇರಿ ತಾಲೂಕು ಮಾಡಬೇಕೆಂದು ನಿರಂತರ ಹೋರಾಟ ಮಾಡಿದವರನ್ನು ಕಡೆಗಣಿಸಿ ಬಿಜೆಪಿ ಕಾರ್ಯಕರ್ತರನ್ನು ಸೇರಿಸಿಕೊಂಡು ತಾಲೂಕು ಉದ್ಘಾಟನೆ ಮಾಡಿದ ಬಗ್ಗೆ ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಸರ್ಕಾರ ತಾಲೂಕು ಘೋಷಣೆ ಮಾಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದಿನ ಸರ್ಕಾರ ಘೋಷಣೆ ಮಾಡಿದ ಕಾವೇರಿ ತಾಲೂಕು ಹೆಸರನ್ನು ಕಾವೇರಿ ಎಂಬ ಪದ ತೆಗೆದು ಕುಶಾಲನಗರ ತಾಲೂಕೆಂದು ಘೋಷಣೆ ಮಾಡಿದ್ದಾರೆ. ಕಾವೇರಿ ತಾಲೂಕು ಹೋರಾಟ ಸಮಿತಿ ನಿರಂತರ ಸರಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಕೊನೆಗೂ ಕಂದಾಯ ಸಚಿವ ಅಶೋಕ ಸದ್ಯದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು. ಸಚಿವರು ಕೊಡಗಿಗೆ ಬರುವುದನ್ನು ಅರಿತ ಬಿಜೆಪಿಯ ಜನಪ್ರತಿನಿಧಿಗಳು ತಮ್ಮದೇ ಸಾಧನೆ ಎಂದು ಬಿಂಬಿಸಿ ಕಾರ್ಯಕರ್ತ ರನ್ನು ಒಗ್ಗೂಡಿಸಿಕೊಂಡು ಹೋರಾಟಗಾರರನ್ನು ಕೈಬಿಟ್ಟು ಉದ್ಘಾಟನೆ ಮಾಡಿರುವದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ ಎಂದಿದ್ದಾರೆ. ಸೌಜನ್ಯಕ್ಕಾದರೂ ಸಭೆಗೆ ಆಹ್ವಾನಿಸದೆ. ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತ ರನ್ನು ಬಿಟ್ಟು ಹೋರಾಟಗಾರರನ್ನ ಅವಮಾನಿಸಿ ಹೊರಗೆ ಕಳುಹಿಸಿರುವುದು ಅತ್ಯಂತ ಖಂಡನೀಯ. ತಾಲೂಕಿಗೆ ಹೆಸರು ಸೂಚಿಸಿದ ಸಂದರ್ಭದಲ್ಲೂ ಬದಲು ಮಾಡಲು ಮುಂದಾಗಿರುವ ಜನಪ್ರತಿನಿಧಿಗಳು. ಬಿಜೆಪಿ ತಾಲೂಕು ಎಂದು ಘೋಷಿಸಲಿ ಎಂದು ಹೇಳಿಕೆ ನೀಡಿದ್ದಾರೆ.