*ಗೋಣಿಕೊಪ್ಪ, ಜು. ೮: ಕಳೆದ ೧೭ ದಿನಗಳಿಂದ ಕೆ.ಬಾಡಗ ಪಂಚಾಯಿತಿ ಕೊರೊನಾ ಮುಕ್ತ ಗ್ರಾಮವಾಗಿ ಗುರುತಿಸಿಕೊಂಡಿದೆ. ಜಿಲ್ಲಾಡಳಿತ ನೀಡುವ ಒಂದು ಲಕ್ಷ ಪ್ರೋತ್ಸಾಹಕರ ಬಹುಮಾನವನ್ನು ಪಡೆದುಕೊಳ್ಳಲು ಪೂರ್ಣ ಅರ್ಹತೆಯನ್ನು ಹೊಂದಿದ್ದು, ಅವಧಿಗೆ ಮುಂಚಿತವಾಗಿ ಅರ್ಜಿ ಸಲ್ಲಿಸಿ ಬಹುಮಾನ ಪಡೆದುಕೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಸಲಹೆ ನೀಡಿದರು.
ಕೆ.ಬಾಡಗ ಪಂಚಾಯಿತಿ ವ್ಯಾಪ್ತಿಯ ಬುಡಕಟ್ಟು ಸಮುದಾಯದವರಿಗೆ ಮತ್ತು ಗ್ರಾಮದ ನಿವಾಸಿಗಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ ಮತ್ತು ನೀವು ಬದುಕಿ, ನಿಮ್ಮವರನ್ನು ಬದುಕಿ ಧ್ಯೇಯದೊಂದಿಗೆ ಲಸಿಕೆಯನ್ನು ಪಡೆದುಕೊಳ್ಳಬೇಕು. ಈ ಮೂಲಕ ಕೊರೊನಾವನ್ನು ಹದ್ದುಬಸ್ತಿನಲ್ಲಿಡಲು ವ್ಯವಸ್ಥಿತವಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಲಸಿಕೆ ಕೊರತೆ ಎದುರಾಗಿದೆ. ಕೆಲವು ದಿನಗಳಲ್ಲಿ ಕೊಡಗಿಗೆ ಅವಶ್ಯವಿರುವ ಲಸಿಕೆಯ ಸೌಕರ್ಯವನ್ನು ಒದಗಿಸಿಕೊಟ್ಟು ಲಸಿಕೆ ಮುಕ್ತ ಜಿಲ್ಲೆಯಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಬಹುಮುಖ್ಯ ಎಂದು ಹೇಳಿದರು. ಸುಮಾರು ೩೦೦ಕ್ಕೂ ಹೆಚ್ಚು ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಯಿತು.
ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಕುಟ್ಟ ವೃತ್ತ ನಿರೀಕ್ಷಕ ಸಿ.ಎ. ಮಂಜಪ್ಪ, ಗ್ರಾ.ಪಂ. ಅಧ್ಯಕ್ಷ ಚಂದ್ರ, ಉಪಾಧ್ಯಕ್ಷ ಚೆಪುö್ಪಡೀರ ರೀಟಾವಿಜಯ, ಸದಸ್ಯ ಮುಕ್ಕಾಟೀರ ರಿತೇಷ್ ಬಿದ್ದಪ್ಪ, ಪಂಚಾಯಿತಿ ಅಭಿವೃದ್ದಿ ಕಳ್ಳಿಚಂಡ ಪೂಣಚ್ಚ, ಶಕ್ತಿ ಕೇಂದ್ರದ ಪ್ರಮುಖ್ ಪೆಮ್ಮಣಮಾಡ ನವೀನ್, ರಮೇಶ್, ಬೊಳ್ಳೆರ ವಿನಯ್, ವನವಾಸಿ ಕಲ್ಯಾಣ ಸಮಿತಿ ಜಿಲ್ಲಾ ಸಂಚಾಲಕ ಹರೀಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಹಾಜರಿದ್ದರು.