*ಗೋಣಿಕೊಪ್ಪ, ಜು. ೮: ವೀರಾಜಪೇಟೆ ತಾಲೂಕಿನ ೧೩ ಕೇಂದ್ರಗಳಲ್ಲಿ ೨೧೬೨ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸಲು ಸಿದ್ದರಾಗಿದ್ದು, ಶಿಕ್ಷಣ ಇಲಾಖೆ ಕೋವಿಡ್ ನಿಯಮದಂತೆ ಪೂರ್ವ ತಯಾರಿ ಕೈಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಿಗಿ ಮಾಹಿತಿ ನೀಡಿದ್ದಾರೆ.
ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ತಾಲೂಕು ಪೊನ್ನಂಪೇಟೆ ತಾ.ಪಂ. ಸಾಮರ್ಥ್ಯ ಸೌಧ ಕಚೇರಿಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕಿನ ೧೩ ಕೇಂದ್ರಗಳಿಗೆ ೪೨೧ ಸಿಬ್ಬಂದಿಗಳನ್ನು ನೇಮಿಸಿದ್ದು, ಒಂದು ಕೊಠಡಿಯಲ್ಲಿ ೧೨ ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ಬೆಂಚಿನಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಕುಳಿತುಕೊಳ್ಳಬಹುದಾಗಿದ್ದು, ಪ್ರತಿ ಕೇಂದ್ರಕ್ಕೆ ಪೊಲೀಸ್ ಸಿಬ್ಬಂದಿ, ದಾದಿ, ಆಶಾಕಾರ್ಯಕರ್ತೆ ಹಾಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
೬ ಐಚ್ಚಿಕ ವಿಷಯವನ್ನು ಎರಡು ದಿನಗಳಲ್ಲಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೂ ಮಾನಸಿಕವಾಗಿ ತಯಾರಿಯಾಗುವಂತೆ ಶಿಕ್ಷಕರು ಕ್ರಮಕೈಗೊಂಡಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಮಾಸ್ಕ್, ಸ್ಯಾನಿಟೈಸ್, ಸ್ಕಿçÃನ್ ಬಳಕೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದ್ದು, ೧೩ ಕೇಂದ್ರಗಳಾದ ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆ, ಸಂತ ಅನ್ನಮ್ಮ ಪದವಿ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲೆ, ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಶ್ರೀಮಂಗಲ ಪದವಿಪೂರ್ವ ಕಾಲೇಜು, ಟಿ. ಶೆಟ್ಟಿಗೇರಿ ಸರ್ಕಾರಿ ಪ್ರೌಢಶಾಲೆ, ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ, ತಿತಿಮತಿ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯುವ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ಹಾಜರಾಗಲು ಬಸ್ಸಿನ ಸೌಕರ್ಯದ ಅಗತ್ಯವಿದೆ. ಕಳೆದ ಸಾಲಿನಲ್ಲಿ ಖಾಸಗಿ ಶಾಲೆಯ ಬಸ್‌ಗಳನ್ನು ಬಳಕೆ ಮಾಡಲಾಗಿತ್ತು. ಆದರೆ, ಸರ್ಕಾರದ ಸುತ್ತೋಲೆಯಲ್ಲಿ ಈ ವಿಚಾರ ಪ್ರಸ್ತಾಪವಾಗದೇ ಇರುವುದರಿಂದ ಬದಲಿ ವ್ಯವಸ್ಥೆಗೆ ಶಿಕ್ಷಣ ಇಲಾಖೆ ತೆರೆದುಕೊಳ್ಳಲಿದೆ ಎಂದು ಸಭೆ ಮಾಹಿತಿ ಒದಗಿಸಿದರು.
ವಿದ್ಯಾರ್ಥಿಗಳಿಗೆ ಸಮಸ್ಯೆಯಾಗ ದಂತೆ ಪೂರ್ವ ತಯಾರಿ ಕೈಗೊಂಡು ಶಿಕ್ಷಕರು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ವ್ಯವಸ್ಥಿತ ಸಿದ್ಧತೆ ಕೈಗೊಳ್ಳ ಬೇಕು. ವಾಹನ ಸೌಕರ್ಯ ಇಲ್ಲದೇ ಇದ್ದ ಸಂದರ್ಭ ಅಂತಹ ಮಕ್ಕಳನ್ನು ಗ್ರಾಮದ ಪ್ರಮುಖರ ಸಹಾಯದ ಮೂಲಕ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ತಾಲೂಕು ದಂಡಾಧಿಕಾರಿ ಯೋಗನಂದ ಅವರು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ವಾಹನದ ಸೌಕರ್ಯದ ವ್ಯವಸ್ಥೆಗೆ ಖಾಸಗಿ ಶಾಲಾ ಶಿಕ್ಷಣಾ ಸಂಸ್ಥೆಗಳ ಮತ್ತು ಖಾಸಗಿ ಬಸ್ ಮಾಲೀಕರ ಮನವೊಲಿಸುವ ಪ್ರಯತ್ನದಿಂದ ಕಾರ್ಯಗತಗೊಳಿಸಲು ಸಭೆ ನಡೆಸಬೇಕು ಎಂದು ತಿಳಿಸಿದರು.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಪಿ.ಆರ್. ಅಯ್ಯಪ್ಪ, ಬಿ.ಆರ್.ಪಿ. ಬಯವಂಡ ಉತ್ತಪ್ಪ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ಹೇಮಂತ್ ಉಪಸ್ಥಿತರಿದ್ದರು.