ಮಡಿಕೇರಿ ಜು.೯ : ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಕೂಡ ಅನ್‌ಲಾಕ್ ಆದೇಶವನ್ನು ಜಾರಿಮಾಡಿ ಸುಗಮ ಜನ ಜೀವನಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ಲು ತಿಳಿಸಿದ್ದಾರೆ.

ಕೊಡಗಿನ ಎಲ್ಲಾ ವರ್ತಕ ಸಮುದಾಯ, ರೆಸಾರ್ಟ್, ಹೊಟೇಲ್, ಲಾಡ್ಜ್, ಹೋಂಸ್ಟೇ ಸೇರಿದಂತೆ ಎಲ್ಲಾ ವ್ಯಾಪಾರೋದ್ಯಮಿಗಳು ಕೋವಿಡ್ ಮಾರ್ಗಸೂಚಿಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಎಲ್ಲಾ ವ್ಯಾಪಾರೋದ್ಯಮಿಗಳು ಇನ್ನು ಮುಂದೆಯೂ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ನಿಯಮಗಳನ್ನು ಪಾಲಿಸಲು ಬದ್ಧರಾಗಿರಬೇಕು. ಸಾರ್ವಜನಿಕರು ಕೂಡ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಅಂತರ ಕಾಯ್ದುಕೊಂಡು ನಿಯಮ ಪಾಲಿಸುವುದರೊಂದಿಗೆ ವರ್ತಕರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಕಳೆದ ೮೦ ದಿನಗಳಿಂದ ಯಾವುದೇ ವ್ಯಾಪಾರ, ವಹಿವಾಟು ಇಲ್ಲದೆ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದರೂ ಅತ್ಯಂತ ಸಹನೆಯಿಂದ ವರ್ತಕ ಸಮುದಾಯ ವರ್ತಿಸಿದೆ.

(ಮೊದಲ ಪುಟದಿಂದ) ಅಲ್ಲದೆ ಜಿಲ್ಲಾಡಳಿತ ನೀಡಿದ ಸೀಮಿತ ಅವಧಿಯಲ್ಲಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಎಲ್ಲೂ ಕಾನೂನು ಉಲ್ಲಂಘಿಸದೆ ಜಿಲ್ಲಾಡಳಿತ ಸೂಚಿಸಿದ ನಿಯಮಗಳೆಲ್ಲವನ್ನೂ ಪಾಲನೆ ಮಾಡಲಾಗಿದೆ. ವರ್ತಕರೊಂದಿಗೆ ಸಾರ್ವಜನಿಕರು ಕೂಡ ಸಹಕಾರ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು, ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವರ್ತಕರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ವರ್ತಕರಿಗೆ ವ್ಯಾಕ್ಸಿನ್ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿಯೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಹಕರಿಸಿದ್ದು, ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.