ಮಡಿಕೇರಿ, ಜು. ೯: ಮಡಿಕೇರಿ ಸನಿಹದ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಹಾಗೂ ಕಾಡೆಮ್ಮೆಗಳ ಉಪಟಳದಿಂದ ಸ್ಥಳೀಯ ರೈತರ ಕೃಷಿ ಫಸಲು ಹಾನಿಗೀಡಾಗಿವೆ. ಅಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಇವುಗಳ ದಾಂಧಲೆ ಹೆಚ್ಚಾಗಿದ್ದು, ಆನೆಗಳನ್ನು ಓಡಿಸಿದರೂ ಮತ್ತೆ ಹಿಂತಿರುಗಿ ಬಂದು ದಾಳಿ ನಡೆಸುತ್ತಿವೆ ಎಂದು ರೈತರು ತಿಳಿಸಿದ್ದಾರೆ.

ಅಲ್ಲಿನ ನಿವಾಸಿಗಳಾದ ಕೂಪದಿರ ವಿಜಯ್, ಕೂಪದಿರ ಈ. ರವಿ ಎಂಬವರ ತೋಟದಲ್ಲಿ ಅಧಿಕ ಹಾನಿ ಸಂಭವಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಕಾಡಾನೆಗಳೊಂದಿಗೆ ಕಾಡೆಮ್ಮೆಗಳೂ ಈ ವ್ಯಾಪ್ತಿಯಲ್ಲಿ ತಿರುಗಾಡುತ್ತಿರುವುದಾಗಿ ಅವರುಗಳು ತಿಳಿಸಿದ್ದಾರೆ. ಕಾಫಿ, ಬಾಳೆ, ಅಡಿಕೆ ಮತ್ತಿತರ ಫಸಲು ಹಾನಿಗೀಡಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.