ಶನಿವಾರಸಂತೆ, ಜು. ೮: ಹೋಬಳಿಯಾದ್ಯಂತ ರೈತರು ಗದ್ದೆಗಳಲ್ಲಿ ಅಗೆ ಹಾಕಿದ್ದು ಭತ್ತದ ಸಸಿಮಡಿ ಬೆಳೆದು ನಿಂತಿದೆ ನಾಟಿಗಾಗಿ ಕೆಸರು ಒಡೆದು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಮಳೆಯಾಗದೆ ಬಿರು ಬೇಸಿಗೆಯಿಂದ ಬಿಸಿಲಿನ ವಾತಾವರಣ ರೈತರನ್ನು ಕಂಗಾಲಾಗಿಸಿದೆ.
ಪುನರ್ವಸು ಮಳೆಯೂ ಕಣ್ಣಮುಚ್ಚಾಲೆಯಾಡುತ್ತಿದೆ. ಗದ್ದೆಗಳು ಒಣಗಿ ನಿಂತಿದೆ. ಭೂಮಿ ಬಿರುಕು ಬಿಟ್ಟಿದೆ. ನಾಟಿ ಕೆಲಸ ಮಾಡೋದು ಹೇಗೆ ? ಕಾಫಿ, ಕಾಳು ಮೆಣಸು, ಶುಂಠಿ ಎಲ್ಲಾ ಬೆಳೆಗೂ ಮಳೆಯ ಅಗತ್ಯವಾಗಿ ಬೇಕು ಎಂದು ಕೆಲ ರೈತರು ಆತಂಕ ವ್ಯಕ್ತಪಡಿಸಿದರು.
ಸಮೀಪದ ಗಡಿಭಾಗದ ಕಳಲೆ ಗ್ರಾಮದ ಕೃಷಿಕರಾದ ಮನೋಜ್ ಹಾಗೂ ಕೆ.ಟಿ. ಕೃಷ್ಣೇಗೌಡರ ಗದ್ದೆಯಲ್ಲಿ ಭತ್ತದ ಸಸಿಮಡಿ ಬೆಳೆದು ನಿಂತಿದೆ. ಮಳೆಯ ನಿರೀಕ್ಷೆಯಲ್ಲಿರುವ ಅವರು ಸಸಿಮಡಿ ಒಣಗಬಾರದೆಂದು ಕೊಳವೆ ಬಾವಿಯಿಂದ ಮೋಟಾರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಅಪ್ಪಶೆಟ್ಟಳ್ಳಿ ಗ್ರಾಮದ ಗದ್ದೆಯೊಂದರಲ್ಲಿ ರೈತರೊಬ್ಬರು ಬಿಂದಿಗೆಯಲ್ಲಿ ನೀರು ಹೊತ್ತು ಸಸಿಮಡಿಗೆ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.
ಭತ್ತ ಮಾತ್ರವಲ್ಲ ಎಲ್ಲಾ ಬೆಳೆಗೂ ಮಳೆ ಬೇಕು ಭೂಮಿ ಬಿರುಕು ಬಿಟ್ಟಿದೆ ಆರಿದ್ರಾ ಪುನರ್ವಸು ದೊಡ್ಡ ದೊಡ್ಡ ಮಳೆ ನಕ್ಷತ್ರಗಳೇ ರೈತರ ಜೀವನದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿದೆ. ಅವಧಿ ಮೀರಿ ಬೆಳೆದ ಭತ್ತದ ಸಸಿಮಡಿಯಿಂದ ಉತ್ತಮ ಇಳುವರಿ ನಿರೀಕ್ಷಿಸುವಂತಿಲ್ಲ ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.