ಸಿದ್ದಾಪುರ, ಜು. ೭: ಮನೆಯಲ್ಲಿ ಬಳಸುತ್ತಿದ್ದ ಜನರೇಟರ್‌ನಿಂದ ಹೊರ ಸೂಸಿದ ಹೊಗೆಯಿಂದ ಗರ್ಭಿಣಿ ಸೇರಿ ೬ ಮಂದಿ ಅಸ್ವಸ್ಥರಾದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಸಂಭವಿಸಿದೆ.

ನೆಲ್ಲಿಹುದಿಕೇರಿ ಶಾಲಾ ರಸ್ತೆಯ ನಿವಾಸಿ ಮೊಹಮ್ಮದ್ ಎಂಬವರು ಇತ್ತೀಚೆಗೆ ಅನಾರೋಗ್ಯವಾದ ಕಾರಣ ಅಸ್ವಸ್ಥರಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಇವರು ಗುಣಮುಖರಾಗಿ ಮನೆಗೆ ಹಿಂತಿರುಗುವಾಗ ವೈದ್ಯರ ಸಲಹೆ ಮೇರೆಗೆ ದಿನನಿತ್ಯ ಕೃತಕ ಆಕ್ಸಿಜನ್ ಬಳಸುವಂತೆ ಸಲಹೆ ನೀಡಿದ್ದರು. ತಾ. ೭ ರಂದು ಮುಂಜಾನೆ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ವೇಳೆಯಲ್ಲಿ ಸ್ವಯಂಚಾಲಿತ ಜನರೇಟರ್ ಚಾಲನೆಗೊಂಡಿದೆ.

ಜನರೇಟರ್‌ನಿAದ ಹೊರ ಹೊಮ್ಮಿದ ಹೊಗೆ ಮನೆಯ ಒಳ ಭಾಗದಲ್ಲಿರುವ

(ಮೊದಲ ಪುಟದಿಂದ) ಎಲ್ಲಾ ಕೋಣೆಗಳಲ್ಲಿ ಪಸರಿಸಿದೆ. ಪರಿಣಾಮ ಗಾಢ ನಿದ್ರೆಯಲ್ಲಿದ್ದ ಕುಟುಂಬದ ಸದಸ್ಯರ ಪೈಕಿ ಗರ್ಭಿಣಿ ಮಹಿಳೆ, ಈರ್ವರು ಬಾಲಕರು ಸೇರಿದಂತೆ ೬ ಮಂದಿ ಹೊಗೆ ಸೇವಿಸಿ

ಪ್ರಜ್ಞಾಹೀನ ಸ್ಥಿತಿಗೆ ಒಳಗಾದರು. ಅದೃಷ್ಟವಶಾತ್ ಅನಾರೋಗ್ಯದಲ್ಲಿರುವ ಮೊಹಮ್ಮದ್ ಅವರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ.

ಸ್ಥಳೀಯರ ಸಮಯ ಪ್ರಜ್ಞೆ: ಬೆಳಕಾದರೂ ಮೊಹಮ್ಮದ್ ಕುಟುಂಬಸ್ಥರು ಮನೆಯಿಂದ ಹೊರಗಡೆ ಕಾಣಿಸದಿರುವುದು ಹಾಗೂ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಸ್ಥಳೀಯರು ಸಂಶಯಗೊAಡು ಮನೆಯ ಬಳಿ ತೆರಳಿ ನೋಡಿದಾಗ ಮನೆಯವರು ಎಚ್ಚರಗೊಂಡೇ ಇರುವುದಿಲ್ಲ. ಇದರಿಂದ ಭಯಗೊಂಡ ಸ್ಥಳೀಯರು ಮನೆಯ ಬಾಗಿಲನ್ನು ಮುರಿದು ಒಳಪ್ರವೇಶ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ೬ ಮಂದಿಯನ್ನು ಸ್ಥಳೀಯರು ತಕ್ಷಣವೇ ಸಿದ್ದಾಪುರ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಚಿಕಿತ್ಸೆಗೆ ಒಳಪಡಿಸಿದ್ದಾರೆ. ೬ ಮಂದಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿಚಾರ ತಿಳಿದು ಹೆಚ್ಚಿನ ಮಂದಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿ ಬಂದು ಆರೋಗ್ಯ ಕ್ಷೇಮವನ್ನು ವಿಚಾರಿಸುತ್ತಿದ್ದುದು ಕಂಡುಬAದಿತು. ೬ ಮಂದಿ ಚೇತರಿಕೆಯಾಗಿರುವುದು ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ. -ವಾಸು. ಎ.ಎನ್.