ಮಡಿಕೇರಿ, ಜು.೬: ಮನೆಗೆ ಒತ್ತಿನಲ್ಲಿರುವ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರ್ನಾಡು ಸಮೀಪದ ಕಟ್ಟೆಮಾಡು ಗ್ರಾಮದ ಕೊಪ್ಪಂಗೇರಿ

(ಮೊದಲ ಪುಟದಿಂದ) ಪೈಸಾರಿ ನಿವಾಸಿ ಹೆಚ್.ಎಸ್.ಲೋಕೇಶ್ ಅಣ್ಣಯ್ಯ ತನ್ನ ಮನೆಯ ಸಮೀಪವಿರುವ ತೋಟದೊಳಗಡೆ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭ ತೋಟದೊಳಗಡೆ ಎರಡು ಬೆಳೆದಿರುವ, ಕಟಾವಿಗೆ ಬಂದಿರುವ ಗಿಡಗಳು ಪತ್ತೆಯಾಗಿವೆ. ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿ ಲೋಕೇಶ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿಕಿರಣ್, ಠಾಣಾಧಿಕಾರಿ ಸದಾಶಿವಯ್ಯ, ಸಿಬ್ಬಂದಿಗಳಾದ ಮನೋಜ್, ದಿನೇಶ್, ಸಜನ್, ಕೃಷ್ಣಮೂರ್ತಿ, ರಾಜೇಶ್ ಪಾಲ್ಗೊಂಡಿದ್ದರು.