ಮಡಿಕೇರಿ, ಜು. ೬: ಅಧಿಕಾರಿಗಳು ಬದ್ಧತೆಯೊಂದಿಗೆ ಮಳೆಗಾಲ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡರೆ ವಿಪತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್. ಅಶೋಕ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಳೆಗಾಲ ಸಂಬAಧ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಪತ್ತು ಎದುರಾದಲ್ಲಿ ಗುರುತಿಸಿರುವ ಸೂಕ್ಷö್ಮ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವವರಿಗೆ ಮೂಲಭೂತ ಸೌಕರ್ಯವಿರುವ ಕಾಳಜಿ ಕೇಂದ್ರಗಳನ್ನು ಕಲ್ಪಿಸಬೇಕು. ಯಾವುದೇ ಸಮಸ್ಯೆ ಕೇಂದ್ರದಲ್ಲಿ ಎದುರಾಗಬಾರದು. ಅಗತ್ಯ ಔಷಧಗಳನ್ನು ಆರೋಗ್ಯ ಇಲಾಖೆ ಮೂಲಕ ಪಡೆದುಕೊಳ್ಳಬೇಕು. ಅಚ್ಚುಕಟ್ಟಾದ ಊಟದ ವ್ಯವಸ್ಥೆ ಇರಬೇಕು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದೊಂದಿಗೆ ಚಪಾತಿ, ಪಲ್ಯ, ಹಪ್ಪಳ, ಮೊಟ್ಟೆ, ಉಪ್ಪಿನಕಾಯಿ ನೀಡಬೇಕು. ಈ ನಿಟ್ಟಿನಲ್ಲಿ ಬೇಕಾದ ಬಾಣಸಿಗರನ್ನು ನಿಯೋಜಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ನೆರೆ ಸಂತ್ರಸ್ತರಿಗೆ ತಂಗಲು ಮೂಲಸೌಲಭ್ಯದೊಂದಿಗೆ ಚಾಪೆ, ಜಮಖಾನ, ಬೆಡ್‌ಶೀಟ್ ಖರೀದಿಗೆ ಕ್ರಮವಹಿಸಿ ವಿಪತ್ತು ಎದುರಾಗದಿದ್ದಲ್ಲಿ ಅದನ್ನು ವಸತಿ ನಿಲಯಕ್ಕೆ ನೀಡಿ. ಸಂತ್ರಸ್ತರ ಸ್ಥಳಾಂತರಕ್ಕೆ ಬಸ್ ಸೇರಿದಂತೆ ಜೀಪ್, ಪಿಕ್‌ಅಪ್‌ಗಳನ್ನು ಕಾಯ್ದಿರಿಸಿಟ್ಟುಕೊಳ್ಳಿ. ರಸ್ತೆಗೆ ಅಡ್ಡಲಾಗಿ ಮರ ಬಿದ್ದರೆ ಅದನ್ನು ತ್ವರಿತ ಹಾಗೂ ಸುಲಭವಾಗಿ

(ಮೊದಲ ಪುಟದಿಂದ) ತೆರವುಗೊಳಿಸಲು ಅಗತ್ಯವಾದ ಉಪಕರಣ, ಕತ್ತಲಲ್ಲಿ ಕಾರ್ಯಾಚರಣೆ ಮಾಡಲು ಸರ್ಚ್ ಲೈಟ್ ಖರೀದಿಸಲು ಆರ್.ಅಶೋಕ ಸೂಚನೆ ನೀಡಿದರು.

ಚರಂಡಿ ಶುಚಿಗೊಳಿಸಿ

ರಾಜ್ಯ, ರಾಷ್ಟç, ಪಿಡಬ್ಲ್ಯೂಡಿ ಸೇರಿದಂತೆ ಗ್ರಾಮೀಣ ರಸ್ತೆಗಳ ಬದಿಯಲ್ಲಿರುವ ಚರಂಡಿಗಳನ್ನು ಶುಚಿಗೊಳಿಸಲು ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಆರ್.ಅಶೋಕ ನಿರ್ದೇಶನ ನೀಡಿದರು.

ಈ ಬಗ್ಗೆ ಪ್ರಸ್ತಾಪಿಸಿದ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲೆಯ ಹಲವು ರಸ್ತೆಗಳ ಬದಿಯಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಸರಾಗವಾಗಿ ನೀರು ಹರಿಯಲು ತೊಡಕಾಗಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅಸಮರ್ಪಕ ಕೆಲಸದಿಂದ ಸರಕಾರದ ಹಣ ಪೋಲಾಗುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಶಾಸಕ ಎಂ.ಪಿ. ಅಪ್ಪಚ್ವು ರಂಜನ್ ಮಾತನಾಡಿ, ಮಳೆ ಬಿರುಸು ಪಡೆಯುವ ಮುನ್ನ ಈ ಬಗ್ಗೆ ಕ್ರಮವಾಗಬೇಕು. ರಸ್ತೆ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಈ ಬಗ್ಗೆ ಕ್ರಮವಹಿಸಬೇಕೆಂದು ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದಿದ್ದರೆ ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹಾನಿಯಾಗುತ್ತವೆ. ಈ ಹಿನ್ನೆಲೆ ಯಂತ್ರಗಳ ಮೂಲಕ ಚರಂಡಿ ಶುಚಿಗೊಳಿಸಿ ಎಂದು ಸೂಚಿಸಿದರು.

ರೂ. ೫೦ ಕೋಟಿ ಇದೆ

ಮಳೆಗಾಲ ಎದುರಿಸಲು ಜಿಲ್ಲಾಡಳಿತ ಬಳಿ ರೂ. ೫೦ ಕೋಟಿ ಹಣ ಇದೆ ಎಂದು ಸಚಿವ ಆರ್. ಅಶೋಕ ತಿಳಿಸಿದರು. ಅದರೊಂದಿಗೆ ಗ್ರಾಮ ಪಂಚಾಯ್ತಿ, ಪ.ಪಂ, ನಗರಸಭೆಗೆ ಮಳೆಗಾಲ ಸಂಬAಧ ಅನುದಾನ ನೀಡಿದ್ದೇವೆ.

ಮಳೆಗಾಲಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲು ಅನುದಾನದ ಸಮಸ್ಯೆ ಇಲ್ಲ. ಸರಕಾರ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುತ್ತೆ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಮರ ತೆರವುಗೊಳಿಸಿ

ಮಳೆಗಾಲದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಪಿಡಬ್ಲ್ಯೂಡಿ ಇಲಾಖೆ ತ್ವರಿತವಾಗಿ ತೆರವುಗೊಳಿಸಿ ಅದನ್ನು ಅರಣ್ಯ ಇಲಾಖೆಯ ಡಿಪೋಗೆ ಒಪ್ಪಿಸಬೇಕು ಎಂದರು. ಶಾಸಕ ಅಪ್ಪಚ್ವು ರಂಜನ್, ಬೀಳುವ ಸ್ಥಿತಿಯಲ್ಲಿರುವ ಮರದ ಕೊಂಬೆ ತೆರವಿಗೆ ಅನುಮತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಶಾಸಕ ಕೆ.ಜಿ.ಬೋಪಯ್ಯ ಕೆಇಬಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಅಶೋಕ, ಹೆಚ್ಚುವರಿ ೭೫ ಲೈನ್‌ಮೆನ್‌ಗಳ ನೇಮಕಾತಿ ಮಾಡಿಕೊಳ್ಳಲಾಗಿದೆ. ಅಗತ್ಯವಾದಲ್ಲಿ ಬೇರೆ ಜಿಲ್ಲೆಗಳಿಂದ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗವುದು. ತ್ವರಿತ ಸ್ಪಂದನ ನೀಡಲು ವಾಹನ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬೇಕಾದ ಉಪಕರಣ, ಕಂಬ, ಟ್ರಾನ್ಸ್ಫಾರಂಗಳನ್ನು ದಾಸ್ತಾನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಅಗತ್ಯ ಕ್ರಮ : ಡಿಸಿ

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಪೊಲೀಸ್, ಅಗ್ನಿಶಾಮಕ, ಎನ್‌ಡಿಆರ್‌ಎಫ್ ಒಂದುಗೂಡಿ ತಂಡ ರಚಿಸಲಾಗಿದೆ. ಜೆಸಿಬಿ, ಹಿಟಾಚಿಗಳನ್ನು ಕಾಯ್ದಿರಿಸಿಕೊಂಡಿದ್ದೇವೆ. ಜುಲೈ ೧೫ ರಿಂದ ಆಗಸ್ಟ್ ೧೫ ರಲ್ಲಿ ಮಳೆ ಹೆಚ್ಚಾಗುವ ಹಿನ್ನೆಲೆ ಈ ಅವಧಿಯಲ್ಲಿ ಸೂಕ್ಷö್ಮ ಪ್ರದೇಶದಲ್ಲಿರುವವರು ಸ್ಥಳಾಂತರಗೊಳ್ಳಲು ಕ್ರಮಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಹೆದ್ದಾರಿ ಕುಸಿತವಾದರೆ ಅಲ್ಲಿನ ದುರಸ್ತಿಗೆ ಅಗತ್ಯ ಸ್ಯಾಂಡ್ ಬ್ಯಾಗ್‌ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಹಣ ಬಿಡುಗಡೆಯಾಗಿಲ್ಲ

೨೦೨೦ರ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ನೀಡಬೇಕಾದ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಮನೆಹಾನಿಗೆ ರೂ. ೫ ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರಥಮ ಹಂತವಾಗಿ ರೂ. ೧ ಲಕ್ಷ ನೀಡಬೇಕಾಗಿದೆ. ಆದರೆ, ಅದು ಇನ್ನೂ ಕೈಸೇರಿಲ್ಲ ಈ ಬಗ್ಗೆ ಕ್ರಮವಹಿಸಬೇಕೆಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದರು.

ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮುಂದಿನ ವಾರದೊಳಗೆ ಹಣ ಬಿಡುಗಡೆ ಮಾಡುವ ಭರವಸೆಯನ್ನು ಆರ್. ಅಶೋಕ ನೀಡಿದರು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಜಿಲ್ಲೆಯಲ್ಲಿ ಮಳೆಗಾಲ ಸಂಬAಧ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.