ಎಸ್ಎಸ್ಎಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಜು. ೬: ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಕುರಿತಂತೆ ಮಕ್ಕಳು ಮತ್ತು ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪ ನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದ ನಂತರ ಮಾತನಾಡಿದ ಅವರು, ಹೊಸ ರೀತಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ಬರೆಯುವ ಕುರಿತು ಮಕ್ಕಳ ಮನಃಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು, ಕಳೆದ ಬಾರಿಯಂತೆ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಈ ಬಾರಿಯೂ ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಮಕ್ಕಳ ಹಿತಕ್ಕಾಗಿ ಶ್ರಮಿಸಬೇಕೆಂದು ಸೂಚನೆ ನೀಡಿದರು. ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ತೀವ್ರವಾಗಿ ಇಳಿಮುಖ ಕಾಣುತ್ತಿರುವುದು ಪೋಷಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸಿದ್ದು ಪರೀಕ್ಷೆಗೆ ಮಕ್ಕಳನ್ನು ಧೈರ್ಯವಾಗಿ ಕಳಿಸಲು ಪೋಷಕರು ಉತ್ಸುಕವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು. ಶೇ. ೯೫ಕ್ಕಿಂತ ಹೆಚ್ಚು ಸಂಖ್ಯೆಯ ಪರೀಕ್ಷಾ ಸಿಬ್ಬಂದಿ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವುದು ಅತ್ಯಂತ ಭರವಸೆ ತಂದಿರುವ ಸಂಗತಿ. ಇನ್ನುಳಿದವರು ಇನ್ನೆರಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ಡಿಡಿಪಿಐಗಳು ಅಂಕಿ - ಅಂಶಗಳ ಮೂಲಕ ತಿಳಿಸಿದ್ದಾರೆ. ಪರೀಕ್ಷೆಗಳ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಆಯಾ ಹಂತದಲ್ಲಿ ಕೈಗೊಂಡ ಉಪಕ್ರಮಗಳನ್ನು ಆಲಿಸಿದ ಸಚಿವರು ಉತ್ತಮ ಕ್ರಮಗಳನ್ನು ಇತರ ಜಿಲ್ಲೆಗಳವರು ವಿನಿಮಯ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಪರೀಕ್ಷೆ ಕುರಿತಂತೆ ಮಕ್ಕಳನ್ನು ನೇರವಾಗಿ ತಲುಪಿ ಆ ಕುರಿತು ಮಾರ್ಗದರ್ಶನ ನೀಡಲು ಮುಂದಾಗಬೇಕು. ಮಕ್ಕಳನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದ ಗ್ರಂಥಾಲಯಗಳಿಗೆ ಕರೆಸಿಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಕ್ರಮ ವಹಿಸಬೇಕು. ಇದನ್ನು ಆಯಾ ಬಿಇಒಗಳು ಬಿಆರ್ಸಿ/ ಸಿಆರ್ಸಿ ಮತ್ತು ಮುಖ್ಯ ಶಿಕ್ಷಕರ ಮೂಲಕ ಈ ಕ್ರಮಕ್ಕೆ ಮುಂದಾಗಬೇಕೆAದು ಸುರೇಶ್ಕುಮಾರ್ ಸಲಹೆ ನೀಡಿದರು. ಸಭೆಯಲ್ಲಿ ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಅಪರ ಆಯುಕ್ತ ನಳಿನ್ ಅತುಲ್, ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಚಂದನ ವಾಹಿನಿ ಪಾಠಗಳ ಲಭ್ಯತೆ: ಬಿಇಒಗಳಿಗೆ ಸೂಚನೆ
ಬೆಂಗಳೂರು, ಜು. ೬: ಕೋವಿಡ್ ಸೋಂಕಿನ ಹಿನ್ನೆಲೆ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ತರಗತಿಗಳು ಆರಂಭವಾಗಿದ್ದು, ಈ ತರಗತಿಗಳಿಗೆ ಮಕ್ಕಳು ಹಾಜರಾಗುವಂತೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಡಿಡಿಪಿಐ ಮತ್ತು ಬಿಇಒಗಳೊಂದಿಗೆ ವೀಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಶೇ. ೩೧ರಷ್ಟು ಮಕ್ಕಳಿಗೆ ದೂರದರ್ಶನ ಸೌಲಭ್ಯವೂ ಇಲ್ಲದೇ ಇರುವುದರಿಂದ ಆ ಮಕ್ಕಳಿಗೆ ಅನುಕೂಲ ವಾಗುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದೂರದರ್ಶನ ಸೌಲಭ್ಯ ಒದಗಿಸಿ ಅಂತಹ ಮಕ್ಕಳಿಗೆ ಚಂದನ ವಾಹಿನಿಯ ಪಾಠಗಳನ್ನು ತಲುಪುವಂತೆ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು. ಸ್ಮಾರ್ಟ್ ಫೋನ್ಗಳು ಮತ್ತು ದೂರದರ್ಶನ ವ್ಯವಸ್ಥೆಯೂ ಇಲ್ಲದ ಮಕ್ಕಳಿಗೆ ಸಂವೇದನಾ ತರಗತಿಗಳು ತಲುಪುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸುರೇಶ್ಕುಮಾರ್ ತಿಳಿಸಿದರು. ಶಾಲಾ ತರಗತಿಗಳು ಭೌತಿಕವಾಗಿ ಆರಂಭವಾಗುವುದು ಇನ್ನೂ ನಿರ್ಧಾರವಾಗಿಲ್ಲವಾದ್ದರಿಂದ ಮಕ್ಕಳ ಕಲಿಕಾ ನಿರಂತರತೆಗೆ ಕ್ರಮ ವಹಿಸಬೇಕಾದ್ದರಿಂದ ಪರ್ಯಾಯ ಬೋಧನೆಗೆ ನಾವು ಹೆಚ್ಚು ಸಕ್ರಿಯವಾಗಬೇಕಿರುವುದರಿಂದ ಇಲಾಖೆಯ ಅಧಿಕಾರಿಗಳು ಪರ್ಯಾಯ ಬೋಧನೆಗೆ ಸ್ಥಳೀಯವಾಗಿ ತಮ್ಮದೇ ಆದ ರೀತಿಯಲ್ಲಿ ಮಕ್ಕಳನ್ನು ತಲುಪಲು ಮತ್ತು ದೂರದರ್ಶನ ವಾಹಿನಿಯ ಪಾಠ ಬೋಧನೆಗಳು ಮಕ್ಕಳಿಗೆ ದೊರೆಯಲು ಕ್ರಮಗಳನ್ನು ಕೈಗೊಳ್ಳಬೇಕೆಂದರು.
ರಾಜ್ಯದಲ್ಲಿAದು ೩೧೦೪ ಹೊಸ ಪ್ರಕರಣ
ಬೆಂಗಳೂರು, ಜು. ೬: ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೧೦೪ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೨೮೫೯೫೯೫ಕ್ಕೆ ಏರಿಕೆಯಾಗಿದೆ. ೪೯೯೨ ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ ೨೭೮೪೦೩೦ಕ್ಕೆ ಏರಿಕೆಯಾಗಿದೆ. ಸೋಂಕಿನಿAದ ಇಂದು ೯೨ ಮಂದಿ ಮೃತಪಟ್ಟಿದ್ದು, ಈವರೆಗಿನ ಒಟ್ಟಾರೆ ಮೃತರ ಸಂಖ್ಯೆ ೩೫೫೨೬ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ ೪೦೦೧೬ ಆಗಿದೆ. ಪಾಸಿಟಿವಿಟಿ ದರ ಶೇ. ೨.೬೫ ರಷ್ಟಿದ್ದರೆ, ಮರಣ ಪ್ರಮಾಣ ಶೇ. ೨.೯೬ ರಷ್ಟಿದೆ. ಬೆಂಗಳೂರಿನಲ್ಲಿ ೭೧೫ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ೧೮೬೩ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು ೧೫ ಮಂದಿ ಸೋಂಕಿನಿAದ ಮೃತಪಟ್ಟಿದ್ದಾರೆ.
ತಮಿಳುನಾಡು ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ
ನವದೆಹಲಿ, ಜು. ೬: ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಮತ್ತು ಪೆನ್ನಿಯಾರ್ ಜಲಾನಯನ ಪ್ರದೇಶದ ಮಾರ್ಕಂಡೇಯ ನದಿಯ ಮೇಲಿರುವ ಅಣೆಕಟ್ಟಿನ ಬಗ್ಗೆ ತನಿಖೆ ನಡೆಸಲು ನ್ಯಾಯಮಂಡಳಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ತಿಳಿಸಿದ್ದಾರೆ. ಕೇಂದ್ರ ಸಚಿವರೊಂದಿಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದುರೈ ಮುರುಗನ್, ಕಾವೇರಿ-ಗುಂಡಾರು ನದಿ ಜೋಡಣೆ ಯೋಜನೆಗೆ ಹಣ ಹಂಚಿಕೆಗೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು. ತಮಿಳುನಾಡಿನ ಜಲಸಂಪನ್ಮೂಲಕ್ಕೆ ಸಂಬAಧಿಸಿದ ವಿವಿಧ ಸಮಸ್ಯೆಗಳು, ಬೇಡಿಕೆಗಳಿಗೆ ಸಂಬAಧಿಸಿದ ಮನವಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಿರುವ ದುರೈ ಮುರುಗನ್, ಸುಪ್ರೀಂಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿರುವಂತೆ ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಬೇಕು, ಬಿಳಿಗುಂಡ್ಲುವಿನಲ್ಲಿ ನೀರಿನ ನೈಜತೆ ಅರಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಸಿಡಬ್ಲ್ಯುಎಂಎ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಸಂಪೂರ್ಣ ಅವಧಿಯ ಅಧ್ಯಕ್ಷರನ್ನು ಶೀಘ್ರವಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರುವುದಾಗಿ ಹೇಳಿದರು. ಸಭೆಯಲ್ಲಿ ತಮಿಳುನಾಡು ಸರ್ಕಾರದ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ, ಮೇಕೆದಾಟು ಯೋಜನೆಗೆ ಸಂಬAಧಿಸಿದAತೆ ಯಾವುದೇ ಚಟುವಟಿಕೆಯನ್ನು ಕೈಗೊಳ್ಳದಂತೆ ಕರ್ನಾಟಕಕ್ಕೆ ಸೂಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
೧.೫ ಕೋಟಿ ಕೋವಿಡ್ ಲಸಿಕೆಗೆ ಸಚಿವ ಸುಧಾಕರ್ ಮನವಿ
ನವದೆಹಲಿ, ಜು. ೬: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರನ್ನು ಭೇಟಿ ಮಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ರಾಜ್ಯಕ್ಕೆ ತಿಂಗಳಿಗೆ ೧.೫ ಕೋಟಿ ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಮನವಿ ಮಾಡಿದ್ದಾರೆ. ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಸಚಿವ ಡಾ. ಕೆ. ಸುಧಾಕರ್, ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ರಾಜ್ಯದಲ್ಲಿ ಕೋವಿಡ್ ಲಸಿಕಾಕರಣ ವೇಗವಾಗಿ ನಡೆಯುತ್ತಿದ್ದು, ಇದಕ್ಕಾಗಿ ಕೇಂದ್ರದಿAದ ಪ್ರತಿ ತಿಂಗಳಿಗೆ ಪೂರೈಸುವ ಲಸಿಕೆ ಪ್ರಮಾಣವನ್ನು ೧.೫ ಕೋಟಿ ಡೋಸ್ಗೆ ಹೆಚ್ಚಿಸಬೇಕು ಎಂದು ಸಚಿವರು ಕೋರಿದರು. ಇದಕ್ಕೂ ಮುನ್ನ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರನ್ನು ಭೇಟಿ ಮಾಡಿದ ಸಚಿವರು, ಇದೇ ಮನವಿಯನ್ನು ಸಲ್ಲಿಸಿದರು. ನಿಮ್ಹಾನ್ಸ್ ಮತ್ತು ಕಿದ್ವಾಯಿ ಆಸ್ಪತ್ರೆಗಳು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳಿಗೆ ಹೊರ ರಾಜ್ಯಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಿ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಿರುವುದರಿಂದ ಈ ಎರಡೂ ಸಂಸ್ಥೆಗಳ ನಾಲ್ಕು ಪ್ರಾದೇಶಿಕ ಕೇಂದ್ರ ಆಸ್ಪತ್ರೆಗಳನ್ನು ಆರಂಭಿಸಬೇಕು ಎಂದು ಸಚಿವರು ಕೋರಿದರು.