ಸೋಮವಾರಪೇಟೆ, ಜು. ೬: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೋಮವಾರಪೇಟೆ-ಮಡಿಕೇರಿ, ಸೋಮವಾರಪೇಟೆ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಕ್ಕಕೆಹೊಳೆ ಜಂಕ್ಷನ್ ಬಳಿಯಲ್ಲಿ ನೂತನವಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ಅನೇಕ ದಶಕಗಳ ಹಿಂದೆ ನಿರ್ಮಾಣವಾಗಿದ್ದ ಬಸ್ ನಿಲ್ದಾಣ ಇದೀಗ ಶಿಥಿಲಾವಸ್ಥೆಗೆ ತಲುಪಿದ್ದು, ಅಡಿಪಾಯ ಈಗಾಗಲೇ ಕುಸಿದಿದೆ. ಇದರಿಂದಾಗಿ ಇಡೀ ಬಸ್ ನಿಲ್ದಾಣ ಕುಸಿದು ಬೀಳುವ ಆತಂಕದಲ್ಲಿದ್ದು, ಶಾಸಕರ ಹುಟ್ಟುಹಬ್ಬದ ಅಂಗವಾಗಿ ಈ ಬಸ್ ನಿಲ್ದಾಣವನ್ನು ನವೀಕರಿಸಲು ಪಕ್ಷದ ಕಾರ್ಯ ಕರ್ತರು ನಿರ್ಧರಿಸಿದ್ದು, ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಪಟ್ಟಣದ ಬಿಜೆಪಿ ಕಾರ್ಯ ಕರ್ತರಾದ ಚೌಡ್ಲು ಜಗನ್ನಾಥ್ ಹಾಗೂ ಪೃಥ್ವಿ ಅವರುಗಳು ೩ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿಕೊಡಲು ಮುಂದೆ ಬಂದಿದ್ದು, ಶಾಸಕರ ಹುಟ್ಟುಹಬ್ಬದ ದಿನದಂದೇ ಕಾಮಗಾರಿಗೆ ಚಾಲನೆ ನೀಡಲಾಯಿತು.

‘ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಅನೇಕ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಬಸ್ ತಂಗುದಾಣ ಕೆಲ ಸಮಯದಲ್ಲೇ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ದಿನಂಪ್ರತಿ ನೂರಾರು ಪ್ರಯಾಣಿಕರು ಈ ನಿಲ್ದಾಣವನ್ನು ಆಶ್ರಯಿಸಿದ್ದರು. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಹುಟ್ಟುಹಬ್ಬದ ಪ್ರಯುಕ್ತ ನೂತನ ಬಸ್ ನಿಲ್ದಾಣವನ್ನು ತಮ್ಮ ಸ್ವಂತ ಹಣದಿಂದ ನಿರ್ಮಿಸಲು ಮುಂದಾಗಿದ್ದೇವೆ. ಈಗಿರುವ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನವಾಗಿ ಬಸ್ ನಿಲ್ದಾಣ ನಿರ್ಮಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಆದಷ್ಟು ಶೀಘ್ರವಾಗಿ ಸಾರ್ವಜನಿಕರ ಸೇವೆಗೆ ಒಪ್ಪಿಸುತ್ತೇವೆ’ ಎಂದು ಬಿ.ಜೆ.ಪಿ. ಕಾರ್ಯಕರ್ತರಾದ ಜಗನ್ನಾಥ್ ಹಾಗೂ ಪೃಥ್ವಿ ಅವರುಗಳು ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದ ರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ. ಸಂಜೀವ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಸದಸ್ಯೆ ತಂಗಮ್ಮ, ಪ.ಪಂ. ಸದಸ್ಯರಾದ ಮಹೇಶ್, ಪಿ.ಕೆ.ಚಂದ್ರು, ಶುಭಕರ್, ಸೋಮೇಶ್, ಶರತ್‌ಚಂದ್ರ, ಚೌಡ್ಲು ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ, ಹಾನಗಲ್ಲು ಗ್ರಾ.ಪಂ. ಸದಸ್ಯೆ ರೇಣುಕ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು