ಕಣಿವೆ, ಜು. ೪: ಇಲ್ಲಿಗೆ ಸಮೀಪದ ಮಣಜೂರು ಗ್ರಾಮದ ಸಿರಿಗೌರಿ ನಿಲಯದ ಒಡತಿ ೮೩ ಪ್ರಾಯದ ಗೌರಮ್ಮ ತನ್ನ ಮನೆಯಲ್ಲಿನ ಮಂಚದ ಮೇಲೆ ತಾ. ೪ ರಂದು ಅಮಾನುಷವಾಗಿ ಹತ್ಯೆಗೀಡಾಗಿದ್ದಾರೆ. ಅದು ಯಾವ ರೀತಿ ಎಂದರೆ ತಾನು ಮಲಗುವ ಹಾಸಿಗೆಯೇ ಮೃತ್ಯುರೂಪು ತಳೆದಂತೆ ಹಾಸಿಗೆಯನ್ನು ಈ ಗೌರಮ್ಮನ ಮುಖದ ಮೇಲೆ ಹಾಕಿ ಅದುಮಿ ಉಸಿರುಗಟ್ಟಿ ಸಾಯಿಸಿರುವುದು ಕಂಡು ಬಂದಿದೆ.

ಈ ವಯೋ ವೃದ್ದೆಯ ಎರಡು ಕೈಗಳು ಹಾಗೂ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಹಗ್ಗ ಬಿಗಿತದ ಊತ ಇಡೀ ಕಾಲುಗಳ ಗಾತ್ರವನ್ನು ಹಿರಿದಾಗಿಸಿ ನೋಡಲು ಆಶ್ಚರ್ಯವಾಗುವಂತಿತ್ತು. ಅಷ್ಟೇ ಅಲ್ಲ, ಅರೆನಗ್ನ ಸ್ಥಿತಿಯಲ್ಲಿದ್ದ ವೃದ್ದೆಯ ಶವದ ವಾಸನೆ ಇಡೀ ಮನೆಯನ್ನು ಆವರಿಸಿತ್ತು. ಈ ದುರ್ಘಟನೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಗೌರಮ್ಮನ ಕುಟುಂಬ

ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯ ಮಣಜೂರು ಗ್ರಾಮದ ಹೆದ್ದಾರಿಯಂಚಿನಲ್ಲೇ ಗೌರಮ್ಮ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು. ಕಳೆದ ೧೧ ವರ್ಷದ ಹಿಂದೆ ಗೌರಮ್ಮನ ಪತಿ ಸಣ್ಣಪ್ಪ ಅವರು ಅನಾರೋಗ್ಯದಿಂದ ನಿಧನಗೊಂಡಿದ್ದರು. ಹಾಗೆಯೇ ೧೪ ವರ್ಷಗಳ ಹಿಂದೆ ಇದ್ದ ಏಕೈಕ ಪುತ್ರ ಇಂಜಿನಿಯರಿAಗ್ ವೃತ್ತಿಯಲ್ಲಿದ್ದ ಈಶ್ವರ ಕೂಡ ಅನಾರೋಗ್ಯದಿಂದಾಗಿ ಅಸು ನೀಗಿದ್ದರು. ಇದ್ದ ನಾಲ್ವರು ಪುತ್ರಿಯರನ್ನು ಮೈಸೂರು, ಹಿತ್ತಲಕೇರಿ, ಬಾಣಾವರ ಹಾಗೂ ದೊಡ್ಡಕಮರವಳ್ಳಿಗೆ ವಿವಾಹ ಮಾಡಿಕೊಡಲಾಗಿದೆ.

ಚಿನ್ನಾಭರಣಕ್ಕೆ ಕೊಲೆ ಆಗಿರಬಹುದೇ?

ಮನೆಯಲ್ಲಿ ಏಕಾಂಗಿಯಾಗಿ ಇದ್ದ ಈ ಗೌರಮ್ಮನ ಬಳಿಯಿದ್ದ ಹಣ ಅಥವಾ ಚಿನ್ನಾಭರಣ ದೋಚಲು ಈ ಹತ್ಯೆ ನಡೆದಿರಬಹುದೇ ಎಂಬ ಸಂಶಯ ಗ್ರಾಮಸ್ಥರಲ್ಲಿ ಮೂಡಿದೆ. ಏಕೆಂದರೆ ಕಳೆದ ಕೆಲ ತಿಂಗಳ ಹಿಂದೆ ೭೦ ಸಾವಿರ ರೂಗಳಿಗೆ ಅಡಿಕೆ ಹಾಗೂ ತೆಂಗನ್ನು ಮಾರಾಟ ಮಾಡಿದ್ದರಂತೆ. ಅಲ್ಲದೆ ಈ ಹಿಂದೆ ಜೋಳದ ಫಸಲನ್ನು ಮಾರಾಟ ಮಾಡಿದ ಹಣವೂ ಇದ್ದಿರಬಹುದು. ಹಾಗೆಯೇ ತಾನು ಹೊಂದಿದ್ದ ಚಿನ್ನಾಭರಣ ಏನಾದರೂ ದೋಚಲು ದುಷ್ಕರ್ಮಿಗಳು ಇಂತಹ ದುಸ್ಸಾಹಸಕ್ಕೆ ಮುಂದಾದರೇ ಎಂದು ಜನ ಮಾತಾಡುತ್ತಿದ್ದಾರೆ.

ದಾಸಪ್ಪ ಎಂಬಾತ ಕೃಷಿ ಮಾಡುತ್ತಿದ್ದ

ಮನೆಯಲ್ಲಿ ಏಕಾಂಗಿಯಾಗಿದ್ದ ಈ ಗೌರಮ್ಮ ಅವರ ಐದು ಎಕರೆ ಕೃಷಿ ಭೂಮಿಯನ್ನು ಶಿರಂಗಾಲ ಗ್ರಾಮದ ದಾಸಪ್ಪ ಎಂಬ ವ್ಯಕ್ತಿ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಈ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಮಕ್ಕಳಿಂದ ದೂರವಿದ್ದರು...

ತನ್ನ ನಾಲ್ವರು ಪುತ್ರಿಯರಿಂದ ದೂರವಿದ್ದ ಈ ಗೌರಮ್ಮ ಯಾರೊಂದಿಗೂ ಬಾಂಧವ್ಯ ಹೊಂದಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಮೃತ ಗೌರಮ್ಮನ ಓರ್ವ ಮಗಳು ಮೀನಾಕ್ಷಿ ಎಂಬವರು ತನ್ನ ತಾಯಿಗೆ ಅನುಕೂಲವಾಗಲಿ ಎಂದು ಮಣಜೂರಿನ ತಾಯಿ ಮನೆಗೆ ಬಂದು ಜಮೀನು ಹಾಗೂ ತೋಟವನ್ನು ನೋಡಿಕೊಂಡಿದ್ದರು. ಆದರೆ ಮಗಳನ್ನೇ ನಂಬದ ಈ ಗೌರಮ್ಮ ಮನೆಯಿಂದ ಹೊರ ಹಾಕಿತು ಎಂದು ಕಂಬನಿ ಮಿಡಿಯುತ್ತಾ ಮಗಳು ಸುಶೀಲ ಹೇಳುತ್ತಾರೆ.

ಭಾನುವಾರ ಮೃತ ಗೌರಮ್ಮನ ಶವವನ್ನು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮನೆಯ ಹಿಂಬದಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇಷ್ಟು ದಿನ ಏಕಾಂಗಿಯಾಗಿದ್ದ ಗೌರಮ್ಮನ ಒಡೆತನದಲ್ಲಿದ್ದ ಮನೆ ಹಾಗೂ ಐದು ಎಕರೆ ಭೂಮಿ ವಾರಸುದಾರರು ಯಾರಾಗುವರು ಎಂಬುದು ಇಲ್ಲಿ ಯಕ್ಷಪ್ರಶ್ನೆ. ಏಕೆಂದರೆ ೧೪ ವರ್ಷಗಳ ಹಿಂದೆ ಮಗ ಈಶ್ವರ ಮೃತಪಟ್ಟ ಬಳಿಕ ತವರಿಗೆ ಮರಳಿದ ಅವರ ಪತ್ನಿ ಇದುವರೆಗೂ ಇತ್ತ ಮುಖ ಹಾಕಿಲ್ಲ. ಸಾವಿಗೂ ಕೂಡ ಧಾವಿಸಲಿಲ್ಲ. ಇಂಜಿನಿಯರ್ ಆಗಿದ್ದ ಪತಿ ದೇವನೇ ಹೋದ ಮೇಲೆ ಆ ಮನೆ ಏಕೆ? ಆ ಆಸ್ತಿ ಏಕೆ ಎಂದು ಎಲ್ಲವನ್ನು ತೊರೆದು ಹೋದ ಗೌರಮ್ಮನ ಸೊಸೆ ಬಾರದಿದ್ದಲ್ಲಿ ಈ ಸಿರಿಗೌರಿ ಮನೆ ಹಾಗೂ ಭೂಮಿಗೆ ನಾಲ್ವರು ಪುತ್ರಿಯರೇ ವಾರಸುದಾರರಾಗುವರೇ!.

- ಕೆ.ಎಸ್. ಮೂರ್ತಿ