ಕಣಿವೆ, ಜು. ೨: ಕಳೆದ ಕೆಲವೇ ದಿನಗಳ ಹಿಂದಷ್ಟೇ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿದ್ದ ಬಗೆ ಬಗೆಯ ಪಕ್ಷಿಗಳು ಇದೀಗ ನಿಸರ್ಗಧಾಮದಿಂದ ನಂಜನಗೂಡಿನ ಬಳಿಯ ಹುಲ್ಲಹಳ್ಳಿಗೆ ಒಮ್ಮಿಂದೊಮ್ಮೆಲೆ ಎಲ್ಲವೂ ಹೋಗಿವೆ....! ಹಾಗೆಯೇ ಪಕ್ಷಿಗಳ ಜೊತೆ ನೋಡುಗರನ್ನು ಮುದಗೊಳಿಸಲು ಅರಣ್ಯ ಇಲಾಖೆ ಅದೇ ಪಕ್ಷಿ ಕೇಂದ್ರದೊಳಗೆ ಬಿಟ್ಟಿದ್ದ ನಕ್ಷತ್ರ ಆಮೆಗಳು ಇದೀಗ ಮೌನಕ್ಕೆ ಜಾರಿವೆ.
ಅಂದರೆ ಕೆಲವರಿಗೆ ಅಚ್ಚರಿಯಾದರೂ ಕೂಡ ಇದು ವಾಸ್ತವ. ಅಯ್ಯೋ ಇದೇನಪ್ಪಾ ಕಳೆದ ವಾರವಷ್ಟೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಶಾಸಕದ್ವಯರಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಹಾಗೂ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಕೈ ಮೇಲೆ ಕುಳ್ಳಿರಿಸಿಕೊಂಡು ಆಡಿಸಿ ಮುದ್ದಾಡಿಸಿ ಅಲ್ಲೇ ನಿಸರ್ಗಧಾಮದ ಒಳಗಿನ ಪಕ್ಷಿ ಆಲಯದೊಳಗೆ ಹಾರಿಸುವ ಮೂಲಕ ಉದ್ಘಾಟಿಸಿದ್ದಾರೆ. ಅದು ಹೇಗೆ ನಂಜನಗೂಡಿಗೆ ಹಾರಿ ಹೋದವು ಅಂದುಕೊಳ್ಳುವಿರಾ....?
ಇಲ್ಲಿದೆ ನೋಡಿ ವಿಚಾರ... ಮೂಲತಃ ಚುಂಚನಕಟ್ಟೆ ಬಳಿಯ ದೊಡ್ಡಕೊಪ್ಪಲು ಗ್ರಾಮದವರಾದ ಎಂಟೆಕ್ ಸ್ನಾತಕೋತ್ತರ ಪದವೀಧರ ಪಕ್ಷಿ ಪ್ರೇಮಿಯೂ ಆಗಿದ್ದ ಪ್ರವೀಣ್ ಎಂಬವರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಿಕೊಂಡು ನಿಸರ್ಗಧಾಮ ದೊಳಗೊಂದು ಪಕ್ಷಿ ಆಲಯ ಮಾಡಿದರೆ ಹೇಗೆ ಎಂದು ಯೋಜಿಸಿದ್ದರು. ಅದರಂತೆ ಹತ್ತಾರು ಲಕ್ಷ ರೂಗಳನ್ನು ವ್ಯಯಿಸಿ ಪ್ರವಾಸಿಗರ ಮನಸೆಳೆವಂತೆ ಪಕ್ಷಿಯ ಆಲಯದ ಪ್ರವೇಶ ದ್ವಾರ ಹಾಗೂ ಪಕ್ಷಿಗಳು ವಿಹರಿಸುವಂತೆ ಬೃಹತ್ ಪ್ರಮಾಣದ ಕಬ್ಬಿಣದ ಕಪಾಟುಗಳನ್ನು ನಿರ್ಮಿಸಿ ದ್ದರು.
ಹಾಗೆಯೇ ಒಳಾವರಣದಲ್ಲಿ ವೃತ್ತಾಕಾರದ ಕೊಳದ ಮಾದರಿ ಹಾಗೂ ಪೌಂಟೇನ್ ನಿರ್ಮಿಸಿ ನೀರು ತುಂಬಿಸಿ ಬಾತು ಕೋಳಿಗಳನ್ನು ಬಿಡುವ ಉದ್ದೇಶವೂ ಇತ್ತು.
(ಮೊದಲ ಪುಟದಿಂದ) ಹಾಗೆಯೇ ಕೃತಕ ಜಲಪಾತವನ್ನು ಸಹ ನಿರ್ಮಿಸಲಾಗಿತ್ತು. ಹಾಗೆಯೇ ಅದರೊಳಗೆ ಕಂದು ಬಣ್ಣದ ಗಿಳಿಗಳು, ಆಫ್ರಿಕನ್ ಲವ್ ಬರ್ಡ್ಸ್, ಕೋಕಾಟೀಲ್, ಬಾತುಕೋಳಿ ಪ್ರಭೇದಕ್ಕೆ ಸೇರಿದ ಬಗೆ ಬಗೆಯ ಪಕ್ಷಿಗಳನ್ನು ಬೇರೆಡೆಗಳಿಂದ ಇಲ್ಲಿಗೆ ತರಲಾಗಿತ್ತು.
ಆದರೆ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಇರುವ ಕಾರಣ, ಪ್ರವಾಸಿಗರೇ ಬಾರದ ಪಕ್ಷಿ ಕೇಂದ್ರವನ್ನು ನಿರ್ವಹಿಸಲು ಸಾಧ್ಯವಾಗದೇ ಪಕ್ಷಿಗಳನ್ನು ಬೇರೆಡೆಗೆ ಕೊಂಡೊಯ್ಯಲಾಗಿದೆ ಎನ್ನುವ ಪ್ರವೀಣ್, ಲಾಕ್‌ಡೌನ್ ತೆರವಾದ ಬಳಿಕ ಮತ್ತೆ ಪಕ್ಷಿಗಳನ್ನು ತಂದು ಬಿಡುವ ಬಗ್ಗೆ ಹೇಳಿದರು.
ಸುಮಾರು ಅರ್ಧ ಎಕರೆ ಜಾಗದಲ್ಲಿರುವ ಉದ್ದೇಶಿತ ಈ ಪಕ್ಷಿ ಕೇಂದ್ರಕ್ಕೆ ಅರಣ್ಯ ಇಲಾಖೆ ಅದು ಯಾವ ರೀತಿ ಬಾಡಿಗೆ ನಿಗದಿಗೊಳಿಸಿದ್ದಾರೆ. ಅಂತಹ ದೈತ್ಯ ಆನೆಯನ್ನೇ ಪಳಗಿಸಿ ಸಾಕುತ್ತಿರುವ ಮತ್ತು ಪ್ರವಾಸಿಗರಿಗೆ ಮನರಂಜನೆ ಹಾಗೂ ಸವಾರಿಯ ಮೂಲಕ ಆದಾಯಗಳಿಸುತ್ತಿರುವ ಅರಣ್ಯ ಇಲಾಖೆಯೇ ಈ ಪಕ್ಷಿ ಕೇಂದ್ರವನ್ನು ನಿರ್ವಹಿಸಬಹು ದಾಗಿತ್ತಾದರೂ ಅದು ಯಾವ ಮಾನದಂಡದಲ್ಲಿ ಖಾಸಗಿಯವರಿಗೆ ಅಷ್ಟೊಂದು ಲಕ್ಷ ರೂಗಳ ಬಂಡವಾಳ ಹೂಡಲು ಅನುಮತಿ ಕೊಟ್ಟಿದ್ದಾದರೂ ಹೇಗೆ ಎಂಬುದು ಇಲ್ಲಿ ಸಾರ್ವಜನಿಕರ ಪ್ರಶ್ನೆ.
ಹೆಸರಿಗಷ್ಟೇ ಅರಣ್ಯ ಇಲಾಖೆಯ ಈ ಪ್ರವಾಸಿಧಾಮವನ್ನು ಕೆಲವು ಖಾಸಗಿ ವ್ಯಕ್ತಿಗಳು ಹೈಜಾಕ್ ಮಾಡುವ ಮೂಲಕವೂ ಇಲಾಖೆಗೆ ನೇರವಾಗಿ ಬರಬಹುದಾದಂತಹ ಆದಾಯವನ್ನು ಆ ವ್ಯಕ್ತಿಗಳೇ ಕಬಳಿಸುತ್ತಿದ್ದರೂ ಕೂಡ ಇಲಾಖೆ ಮಾತ್ರ ಮೌನ ವಹಿಸಿರುವುದು ಕೆಲವು ಅನುಮಾನ ಗಳಿಗೆ ಎಡೆಮಾಡಿ ಕೊಡುತ್ತಿದೆ. ಆದಾಗ್ಯೂ ನೂತನವಾಗಿ ಸಿದ್ದಗೊಂಡಿರುವ ಪಕ್ಷಿ ಕೇಂದ್ರ, ನಿಸರ್ಗಧಾಮದೊಳಕ್ಕೆ ಬರುವ ಪ್ರವಾಸಿಗರ ಕಣ್ಮನ ಸೆಳೆಯು ವಂತಾಗಲಿ. ಪಕ್ಷಿಗಳ ಜೊತೆ ಪ್ರತ್ಯೇಕ ವಾದ ಕಪಾಟಿನೊಳಗೆ ಬಿಟ್ಟಿರುವ ನಕ್ಷತ್ರ ಆಮೆಗಳು ಇದೀಗ ಪಕ್ಷಿಗಳ ಚಲನ ವಲನ ಹಾಗೂ ಚಿಲಿಪಿಲಿ ಗಳ ಸದ್ದಿಲ್ಲದೇ ಮೌನವಾಗಿವೆ. -ಕೆ.ಎಸ್. ಮೂರ್ತಿ