ಸಿದ್ದಾಪುರ, ಜು. ೩: ಸಿದ್ದಾಪುರದ ಎಂ.ಜಿ. ರಸ್ತೆ ಹಾಗೂ ಮಾರುಕಟ್ಟೆ ವಿಭಾಗದಲ್ಲಿ ಮಾಡಲಾಗಿದ್ದ ಸೀಲ್‌ಡೌನ್ ಅನ್ನು ಸೋಮವಾರ ತೆರವುಗೊಳಿಸಲಾಗುವುದು ಎಂದು ವೀರಾಜಪೇಟೆ ತಹಶೀಲ್ದಾರರಾದ ಡಾ. ಯೋಗಾನಂದ್ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಸಿದ್ದಾಪುರಕ್ಕೆ ಭೇಟಿ ನೀಡಿ ಸೀಲ್‌ಡೌನ್ ವ್ಯಾಪ್ತಿಯ ಜನರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ಮಾರುಕಟ್ಟೆ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಸೀಲ್‌ಡೌನ್‌ನಿಂದಾಗಿ ಆ ಭಾಗದ ಜನರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎಂದರು. ಈ ಬಗ್ಗೆ ಪೊನ್ನಣ್ಣ ಅವರು ತಹಶೀಲ್ದಾರರ ಗಮನ ಸೆಳೆದಿದ್ದು, ಸ್ಥಳಕ್ಕೆ ತಹಶೀಲ್ದಾರರು ಆಗಮಿಸಿ ಸೀಲ್‌ಡೌನ್ ತೆರವುಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಸೀಲ್‌ಡೌನ್ ಮಾಡಿದ ಕಾರಣ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸ ಪ್ರಕರಣಗಳು ಕಂಡುಬAದಿಲ್ಲ. ಹಾಗಾಗಿ ತಾ. ೫ರ ಸೋಮವಾರ ದಂದು ಸೀಲ್‌ಡೌನ್ ತೆರವುಗೊಳಿಸ ಲಾಗುವುದು. ಸೀಲ್‌ಡೌನ್ ತೆರವುಗೊಳಿಸಿದರೂ ಕೂಡ ಜನರು ಎಚ್ಚರಿಕೆಯಿಂದ ಇರಬೇಕು. ಸರಕಾರದ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು ಎಂದರು. ಸದ್ಯದಲ್ಲೇ ಸಿದ್ದಾಪುರ ವ್ಯಾಪ್ತಿಯ ೧೮ ವರ್ಷ ಪ್ರಾಯದ ಎಲ್ಲರಿಗೂ ಹಾಗೂ ಹಾಡಿಯ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಕಾರ್ಯದರ್ಶಿ ಎಂ.ಎಸ್. ವೆಂಕಟೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ, ಕಾಂಗ್ರೆಸ್ ಮುಖಂಡರಾದ ಆರ್.ಕೆ. ಸಲಾಂ, ಬಿಜೋಯ್, ಗ್ರಾ.ಪಂ. ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.