ಸೋಮವಾರಪೇಟೆ, ಜೂ.೨೯: ಕೊರೊನಾ ಸೋಂಕು ತಗುಲಿ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದ ಅವಿವಾಹಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎರಡು ದಿನಗಳ ನಂತರ ಬೆಳಕಿಗೆ ಬಂದಿದ್ದು, ಮೃತದೇಹವನ್ನು ಶ್ರದ್ಧಾಂಜಲಿ ವಾಹನದ ಸಿಬ್ಬಂದಿಗಳೊAದಿಗೆ ಶಾಸಕ ಅಪ್ಪಚ್ಚುರಂಜನ್ ಅವರು ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಗ್ರಾಮದ ಲಕ್ಕೇರಿ ಪೈಸಾರಿಯಲ್ಲಿರುವ ಬೇಬಿ ಎಸ್ಟೇಟ್ ಮಾಲೀಕ ಪಟ್ಟಮಾಡ ಮಂದಣ್ಣ ಅವರ ಪುತ್ರ ಸುಬ್ಬಯ್ಯ (ಸುರೇಶ್ ೬೭) ಎಂಬವರೇ ಮೃತಪಟ್ಟವರು.
ಕಳೆದ ಕೆಲ ದಿನಗಳಿಂದ ಕೊರೊನಾ ರೋಗ ಲಕ್ಷಣ ಹಿನ್ನೆಲೆ ಸುಬ್ಬಯ್ಯ ಅವರಿಗೆ ಪರೀಕ್ಷೆ ಮಾಡಿಸಿದ ಬಳಿಕ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಸುಬ್ಬಯ್ಯ ಅವರನ್ನು ಕೂಡಿಗೆಯ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಯಿತು. ಅಲ್ಲಿ ಅವರಿಗೆ ವಾತಾವರಣ ಹಿಡಿಸಲಿಲ್ಲ ಎಂದು ಮರಳಿ ಮನೆಗೆ ಬಂದು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು ಎನ್ನಲಾಗಿದೆ.
ಮನೆಗೆ ಪೇಪರ್ ಮತ್ತು ಹಾಲು ಹಾಕುವ ಸ್ಥಳೀಯ ಯುವಕ ಕಳೆದ ಮೂರು ದಿನಗಳಿಂದ ಸುಬ್ಬಯ್ಯ ಅವರ ಸಂಪರ್ಕ ಸಿಗದಿದ್ದಾಗ ನೆರೆ ಮನೆಯವರ ಗಮನಕ್ಕೆ ತಂದಿದ್ದಾನೆ. ಆ ನಿವಾಸಿಗಳು ನಿನ್ನೆ ರಾತ್ರಿ ಶಾಸಕ ರಂಜನ್ ಅವರ ಗಮನಕ್ಕೆ ತಂದಿದ್ದಾರೆ. ನಿನ್ನೆ ಸಂಜೆಯಿAದಲೇ ಮನೆಯೊಳಗಿನಿಂದ ದುರ್ವಾಸನೆ ಬರುತ್ತಿತ್ತು ಎಂದು ತಿಳಿದುಬಂದಿದೆ. ಶಾಸಕರು ಇಂದು ಬೆಳಿಗ್ಗೆ ಮನೆಗೆ ಭೇಟಿ ನೀಡಿ, ಕುಟುಂಬಸ್ಥರು ಹಾಗೂ ಪೊಲೀಸರ ಸಮಕ್ಷಮ ಬಾಗಿಲು ಒಡೆಸಿದರು. ಒಳಹೊಕ್ಕು ನೋಡಿದಾಗ ಸೋಫ ಮೇಲೆ ಕುಳಿತ ಸ್ಥಿತಿಯಲ್ಲಿ ಸುಬ್ಬಯ್ಯ ಅವರ ಮೃತದೇಹ ಕಂಡುಬAದಿದೆ.
ಶಾಸಕ ರಂಜನ್ ಅವರು ಮಡಿಕೇರಿಯ ಶ್ರದ್ಧಾಂಜಲಿ ವಾಹನಕ್ಕೆ ಮಾಹಿತಿ ನೀಡಿದ್ದು, ಶ್ರದ್ಧಾಂಜಲಿ ವಾಹನದ ಸಿಬ್ಬಂದಿಗಳೊAದಿಗೆ ತಾವೂ ಸಹ ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ಮನೆಯೊಳಗಿನಿಂದ ವಾಹನಕ್ಕೆ ಸಾಗಿಸುವ ಮೂಲಕ ಗಮನ ಸೆಳೆದರು. ಮೃತರ ಸಹೋದರಿ ಶೈಲಾ ಬೋಪಯ್ಯ ಹಾಗೂ ಬಾವ ಬೋಪಯ್ಯ ಅವರುಗಳೂ ಸ್ಥಳದಲ್ಲಿದ್ದರು. ಘಟನೆ ಸಂಬAಧ ಶೈಲಾ ಬೋಪಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅವಿವಾಹಿತರಾಗಿದ್ದ ಸುಬ್ಬಯ್ಯ ಅವರು ಎಸ್ಟೇಟ್ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಕಳೆದ ತಾ. ೧೫ರಂದು ಸುಬ್ಬಯ್ಯ ಅವರ ಮನೆಗೆ ಸ್ಥಳೀಯ ಆಶಾ ಕಾರ್ಯಕರ್ತೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರೂ ಸಹ ಪಿಪಿಇ ಕಿಟ್ ಧರಿಸಿ ಮನೆಯೊಳಗೆ ತೆರಳಿ ಮೃತದೇಹದ ಪಂಚನಾಮೆ ನಡೆಸಿದರು. ಸ್ಥಳೀಯ ಮಾದಾಪುರ ಪೊಲೀಸ್ ಠಾಣೆಯ ಎ.ಎಸ್.ಐ. ಪೊನ್ನಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡರು.
ಶಾಸಕ ರಂಜನ್ ಅವರು ಪಿಪಿಇ ಕಿಟ್ ಧರಿಸಿ ಮನೆಯೊಳಗೆ ತೆರಳಿ ಮೃತದೇಹವನ್ನು ವಾಹನಕ್ಕೆ ಸಾಗಿಸಲು ಸಹಕರಿಸಿದ ಕ್ರಮಕ್ಕೆ ಸ್ಥಳೀಯರಾದ ಪದ್ಮನಾಭ, ಗ್ರಾ.ಪಂ.ಸದಸ್ಯ ಜರ್ಮಿ ಸೇರಿದಂತೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮಡಿಕೇರಿಯ ಹಿಂದೂ ರುದ್ರ ಭೂಮಿಯಲ್ಲಿ ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆಗೊಳಿಸಲಾಯಿತು.