ವೀರಾಜಪೇಟೆ, ಜೂ. ೨೯: ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ವೀರಾಜಪೇಟೆ ಕಂಡಿಮಕ್ಕಿ ಬಾಳುಗೋಡು ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಯ ಕಂಡಿಮಕ್ಕಿ ಗ್ರಾಮದ ನಿವಾಸಿ ಜಿ.ಎಂ. ನಿಶಾ ಮತ್ತು ದಿ. ಜಿ.ಆರ್. ಮಧು ದಂಪತಿಯರÀ ಮೂರನೇ ಪುತ್ರಿ, ೯ನೇ ತರಗತಿಯ ವಿದ್ಯಾರ್ಥಿನಿ ಪವಿತ್ರ ಜಿ.ಎಂ. (೧೪) ಸಾವನ್ನಪ್ಪಿದ ಬಾಲಕಿ.
ಮಧು ಮತ್ತು ನಿಶಾ ದಂಪತಿಯರಿಗೆ ಮೂವರು ಹೆಣ್ಣು ಮಕ್ಕಳು. ಮಧು ೧೧ ವರ್ಷಗಳ ಹಿಂದೆ ಮರಣಹೊಂದಿದ್ದು, ನಿಶಾ ನಗರದ ಖಾಸಗಿ ಶಾಲೆಯಲ್ಲಿ ಡಿ ಗ್ರೂಪ್ ನೌಕರಿಯಲ್ಲಿದ್ದರು. ಲಾಕ್‌ಡೌನ್‌ನಿಂದ ಶಾಲೆ ಬಂದ್ ಆಗಿರುವುದರಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇಂದು ಎಂದಿನAತೆ ಮೂವರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ತೋಟದ ಕೆಲಸಕ್ಕೆ ತೆರಳಿದ್ದರು.
ತೋಟದಲ್ಲಿ ನಿಶಾರಿಗೆೆ ಉದರಬೇನೆ ಕಾಣಿಸಿಕೊಂಡು ಮಧ್ಯಾಹ್ನ ಮನೆಗೆ ಹಿಂದಿರುಗಿದ್ದಾರೆ. ೧೨.೩೦ ಗಂಟೆ ವೇಳೆಗೆ ಮನೆಯಲ್ಲಿದ್ದ ಪವಿತ್ರಳಿಗೆ ಎದೆನೋವು ಕಾಣಿಸಿಕೊಂಡಿದೆ. ಇಬ್ಬರು ಅಕ್ಕಂದಿರು ಕುಡಿಯಲು ನೀರು ಕೊಟ್ಟಿದ್ದಾರೆ. ಕೂಡಲೇ ಪವಿತ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಅಸ್ವಸ್ಥಳಾದ ಆಕೆಯನ್ನು ಸಂಬAಧಿಕರ ಸಹಾಯದಿಂದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಆಕೆ ಅದಾಗಲೇ ಸಾವನ್ನಪ್ಪಿರುವದಾಗಿ ತಿಳಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗಳು ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಸಿ.ಬಿ. ಶ್ರೀಧರ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಮೃತಳ ತಾಯಿ ನಿಶಾ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವೇ ಸಾವಿನ ಬಗ್ಗೆ ಕಾರಣ ತಿಳಿಯಲಿದೆ.
-ಕೆ.ಕೆ.ಎಸ್., ವೀರಾಜಪೇಟೆ