ಸಿದ್ದಾಪುರ, ಜೂ. ೨೫: ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ಭಾಗಗಳಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿರುವ ೧೮೦ ಮನೆಗಳನ್ನು ತಾ. ೨೫ರಿಂದ ೧೦ ದಿನಗಳವರೆಗೆ ಸೀಲ್ಡೌನ್ ಮಾಡಲಾಗಿದೆಯೆಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಯಾಗಿರುವ ಡಾ. ಯೋಗಾನಂದ ತಿಳಿಸಿದ್ದಾರೆ.
ಸಿದ್ದಾಪುರದ ಮಾರುಕಟ್ಟೆಯ ಸುತ್ತಮುತ್ತಲಿನಲ್ಲಿ ಹಾಗೂ ಸಮೀಪದ ಎಂ.ಜಿ. ರಸ್ತೆಯ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಏರತೊಡಗಿದೆ. ಅಲ್ಲದೇ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ಶುಕ್ರವಾರದಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗ್ರಾ.ಪಂ.ಯ ಅಧ್ಯಕ್ಷರು, ಪಿ.ಡಿ.ಓ., ಠಾಣಾಧಿಕಾರಿ ಅವರುಗಳ ಸಮ್ಮುಖದಲ್ಲಿ ಸಭೆ ನಡೆಸಿದರು.
ಸಿದ್ದಾಪುರ ಮಾರುಕಟ್ಟೆಯ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕಿತರ
(ಮೊದಲ ಪುಟದಿಂದ) ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯ ವ್ಯಾಪ್ತಿಯ ಹಾಗೂ ಎಂ.ಜಿ. ರಸ್ತೆಯ ಭಾಗದಲ್ಲಿ ಇರುವ ೧೮೦ಕ್ಕೂ ಅಧಿಕ ಮನೆಗಳನ್ನು ಇಂದಿನಿAದ ೧೦ ದಿನಗಳವರೆಗೆ ಸೀಲ್ಡೌನ್ ಮಾಡಲಾಗುವುದಾಗಿ ಯೋಗಾನಂದ್ ಹೇಳಿದರು. ಈ ಭಾಗವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆಯೆಂದು ಅವರು ಮಾಹಿತಿ ನೀಡಿದರು. ಈಗಾಗಲೇ ಈ ಭಾಗದಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿತರು ಪತ್ತೆ ಆಗುತ್ತಿದ್ದಾರೆಂದರು. ಸೋಂಕಿತರನ್ನು ವೀರಾಜಪೇಟೆಯ ಬಾಳುಗೋಡುವಿನಲ್ಲಿರುವ ಕೋವಿಡ್ ಸೆಂಟರ್ಗೆ ಕಳುಹಿಸಲಾಗುತ್ತಿದ್ದು, ಅಲ್ಲಿ ಎಲ್ಲಾ ಸೌಲಭ್ಯ ಇದೆಯೆಂದರು. ಸೀಲ್ಡೌನ್ ಆದ ನಿರ್ಬಂಧಿತ ಪ್ರದೇಶದ ೧೮೦ಕ್ಕೂ ಅಧಿಕ ಕುಟುಂಬದವರಿಗೆ ಪಂಚಾಯಿತಿಯ ಪಿಡಿಓ ಮುಖಾಂತರ ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಹಾಗೂ ಸಂಜೆ ಅಗತ್ಯ ವಸ್ತುಗಳನ್ನು ಒದಗಿಸಿಕೊಡಲಾಗುವುದೆಂದು ತಿಳಿಸಿದರು. ನಿರ್ಬಂಧಿತ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳಲ್ಲೂ ಅನಾರೋಗ್ಯ ಇರುವ ಮಂದಿಗೆ ಔಷಧಿಗಳನ್ನು ಕೂಡ ಕಲ್ಪಿಸಿಕೊಡಲಾಗುವುದೆಂದು ಹೇಳಿದರು. ನಿರ್ಬಂಧಿತ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲು ನೆಗೆಟಿವ್ ವರದಿ ಇರುವ ಇಬ್ಬರು ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನಿರ್ಬಂಧಿತ ಪ್ರದೇಶದ ನಿವಾಸಿಗಳ ಗಂಟಲು ದ್ರವ ಪರೀಕ್ಷೆಯನ್ನು ಮುಂದುವರಿಸಲಾಗುವುದು ಎಂದರು. ಸಿದ್ದಾಪುರ ಪಿಡಿಓ ವಿಶ್ವನಾಥ್ ಮಾತನಾಡಿ, ಮಾರುಕಟ್ಟೆ ಭಾಗದಲ್ಲಿ ಈಗಾಗಲೇ ಗಂಟಲು ದ್ರವ ಪರೀಕ್ಷೆಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸೋಂಕಿತರ ಮಾಹಿತಿ ತಿಳಿದುಬರುತ್ತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ- ಕರಡಿಗೋಡು ಗ್ರಾಮದ ನದಿ ತೀರದ ನಿವಾಸಿಗಳಿಗೆ ಸೇರಿ ೧೮ ವರ್ಷ ಮೇಲ್ಪಟ್ಟವರಿಗೆ ಅಂದಾಜು ೩ ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆಯನ್ನು ನೀಡಲಾಗಿದೆಯೆಂದು ಮಾಹಿತಿ ನೀಡಿದರು.
ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಪಂಚಾಯಿತಿಯ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಸಿದ್ದಾಪುರದ ಠಾಣಾಧಿಕಾರಿ ಮೋಹನ್ ರಾಜ್ ಮಾತನಾಡಿ, ಸಿದ್ದಾಪುರ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ನಿರ್ಬಂಧಿತ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ೧೦ ದಿನಗಳವರೆಗೆ ತಮ್ಮ ಮನೆಗಳಿಂದ ಅನಗತ್ಯವಾಗಿ ಹೊರಬಂದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದರು. ನಿರ್ಬಂಧಿತ ಪ್ರದೇಶದ ಸುತ್ತಮುತ್ತಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದೆಂದರು. ಸೀಲ್ಡೌನ್ ಮಾಡಿದ ಭಾಗದ ನಿವಾಸಿಗಳು ೧೦ ದಿನಗಳ ಕಾಲ ಮನೆಯಿಂದ ಹೊರಕ್ಕೆ ಬಾರದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಪಿಡಿಓ ವಿಶ್ವನಾಥ್, ಠಾಣಾಧಿಕಾರಿ ಮೋಹನ್ ರಾಜ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಭಾನುಪ್ರಿಯ, ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್, ಮೋನಿಷ ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.
ನಿವಾಸಿಗಳ ಆಕ್ಷೇಪ
ಸಿದ್ದಾಪುರ ಮಾರುಕಟ್ಟೆ ಹಾಗೂ ಎಂ.ಜಿ ರಸ್ತೆ ತಾಲೂಕು ಆಡಳಿತದ ವತಿಯಿಂದ ಸೀಲ್ಡೌನ್ ಮಾಡಲು ಮುಂದಾದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು.
ಮಾರುಕಟ್ಟೆ ಹಾಗೂ ಎಂ.ಜಿ ರಸ್ತೆ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸೀಲ್ಡೌನ್ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಸಂಪೂರ್ಣ ಮಾರುಕಟ್ಟೆಯ ಭಾಗದಲ್ಲಿ ನೂರಾರು ಮನೆಗಳಿದ್ದು, ಒಂದು ಭಾಗದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸಂಪೂರ್ಣ ಭಾಗ ಸೀಲ್ಡೌನ್ ಮಾಡದಂತೆ ಒತ್ತಾಯಿಸಿದರು. ಮಾರುಕಟ್ಟೆಯ ಭಾಗದಲ್ಲಿ ಬಡ ಕೂಲಿ ಕಾರ್ಮಿಕರೇ ಇದ್ದು, ನಿತ್ಯ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಆಹಾರಕ್ಕೂ ಸಮಸ್ಯೆ ಎದುರಾಗಲಿದ್ದು, ಈವರೆಗೂ ಗ್ರಾ.ಪಂ. ಆಹಾರ ಕಿಟ್ ವಿತರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ೧೦ ದಿನಗಳು ಮನೆಯಲ್ಲೇ ಇದ್ದರೆ ಮನೆಯಲ್ಲಿರುವವರನ್ನು ಸಾಕುವವರು ಯಾರು, ನೆಗೆಟಿವ್ ವರದಿ ಇದ್ದವರನ್ನು ಕೆಲಸಕ್ಕೆ ಹೋಗಲು ಅನುವು ಮಾಡಿಕೊಡಬೇಕೆಂದು ಕೋರಿದರು. ಈ ಸಂದರ್ಭ ಸೀಲ್ಡೌನ್ ಮಾಡಲು ತೆರಳಿದ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರನ್ನು ಅಲ್ಲಿನ ನಿವಾಸಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಇದೇ ಸಂದರ್ಭ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅಲ್ಲಿ ನೆರೆದಿದ್ದ ನಿವಾಸಿಗಳನ್ನು ಮನೆಗೆ ತೆರಳುವಂತೆ ಎಚ್ಚರಿಕೆ ನೀಡಿದರು.
-ವಾಸು ಎ.ಎನ್.