ಸಿದ್ದಾಪುರ, ಜೂ. ೨೫: ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಬಾಡಗ-ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಎಸ್ಟೇಟ್‌ನಲ್ಲಿ ನಡೆದಿದೆ. ಹಾಡಹಗಲೇ ಕಾಫಿ ತೋಟದಲ್ಲಿ ವಿದ್ಯುತ್ ಸಂಪರ್ಕವನ್ನು ಪರಿಶೀಲನೆ ನಡೆಸುತ್ತಿದ್ದ ಕಾರ್ಮಿಕ ಪ್ರಭು ಎಂಬವರು ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬಿದಿರಿನ ಪೊದೆ ಒಳಗಿದ್ದ ಚಿರತೆ ಏಕಾಏಕಿ ಪ್ರಭುವಿನ ಮೇಲೆ ದಾಳಿ ನಡೆಸಿ ಬೆನ್ನಿನ ಭಾಗಕ್ಕೆ ಹಾಗೂ ಶರೀರಕ್ಕೆ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಪ್ರಭು ಜೋರಾಗಿ ಕಿರುಚಿಕೊಂಡ ಸಂದರ್ಭದಲ್ಲಿ ಚಿರತೆಯು ಅಲ್ಲಿಂದ ಕಾಲ್ಕಿತ್ತಿದೆ. ನಂತರ ಸಮೀಪದ ಕಾರ್ಮಿಕರು ಗಾಯಾಳು ಪ್ರಭುವನ್ನು ಸಿದ್ದಾಪುರ ಸಮುದಾಯ

(ಮೊದಲ ಪುಟದಿಂದ) ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು. ಘಟನೆಯ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಾಳಿಯಿಂದ ತತ್ತರಿಸಿರುವ ಕಾರ್ಮಿಕರು ಇದೀಗ ಚಿರತೆ ದಾಳಿಯಿಂದ ಭಯಭೀತರಾಗಿದ್ದಾರೆ. ವರದಿ : ವಾಸು