ಮಡಿಕೇರಿ, ಜೂ. ೨೫: ಮೇಯುತ್ತಿದ್ದ ಹಸುಗಳನ್ನು ಕದ್ದೊಯ್ದು ಗುಂಡಿಕ್ಕಿ ಕೊಂದು ಮಾಂಸ ಮಾಡಿ ಸಾಗಾಟ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂಜಿಲ ಗ್ರಾಮದ ಮಹಮ್ಮದ್ ರಿಯಾಜ್ (೩೩) ಬಂಧಿತ ಆರೋಪಿ. ತಾ. ೮ ರಂದು ಕಗ್ಗೋಡ್ಲು ಗ್ರಾಮದ ರಂಜನ್ ಎಂಬವರಿಗೆ ಸೇರಿದ ಎರಡು ಹಸುಗಳನ್ನು ಮನೆಯ ಅನತಿ ದೂರದಲ್ಲಿ ಕಟ್ಟಿ ಮೇಯಲು ಬಿಟ್ಟ ಸಂದರ್ಭ ಹಸುವನ್ನು ಯಾರೋ ಕದ್ದೊಯ್ದಿದ್ದರು. ಎಲ್ಲಾ ಕಡೆ ಹಸುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸಂಜೆ ೫ ಗಂಟೆ ವೇಳೆಗೆ ಪಕ್ಕದ ದ್ವಾರಕ ತೋಟದ ಕಡೆಯಿಂದ ಭಾರಿ ಗುಂಡಿನ ಸದ್ದು ಕೇಳಿ ಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಕೊಂದ ಹಸುವಿನ ಹೊಟ್ಟೆಯೊಳಗಿನ ಭಾಗ, ಬಾಲದ ಭಾಗ ಪತ್ತೆಯಾಗಿದೆ ಎಂದು ಹಸು ಮಾಲೀಕ ರಂಜನ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಆಲ್ಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ.