ಕಣಿವೆ, ಜೂ. ೨೪: ಯಾರಾದರು ಒಬ್ಬ ರೈತ ಏನನ್ನಾದರೂ ಬೆಳೆದು ಒಂದಿಷ್ಟು ಹಣ ಮಾಡಿದರೆ ಸಾಕು. ಉಳಿದ ರೈತರೆಲ್ಲರೂ ಅದನ್ನೇ ಬೆಳೆಯಲು ಮುಂದಾಗುತ್ತಾರೆ. ಹೀಗಾಗಿ ಉತ್ಪನ್ನ ಜಾಸ್ತಿಯಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಒಂದೇ ಸಮನೆ ಕುಸಿಯುತ್ತದೆ. ಇದರಿಂದ ನೆಮ್ಮದಿ ಕಳೆದುಕೊಳ್ಳುವ ಕೆಲವು ರೈತರು ಕೃಷಿಯತ್ತ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ.

ಕಳೆದ ಎರಡು ವರ್ಷಗಳಿಂದ ನಾಡಿಗೆ ಕಂಟಕವಾಗಿರುವ ಕೊರೊನಾದಿಂದಾಗಿ ಅನ್ನದಾತರು ಅನೇಕರು ಅನೇಕ ಕಡೆಗಳಲ್ಲಿ ಬೆಳೆದಿದ್ದ ಗೆಡ್ಡೆ ಗೆಣಸು ಫಸಲಿಗೆ ಬೆಲೆ ಸಿಗದ ಕಾರಣ ಅವಧಿ ಮೀರಿದ ಫಸಲು ಹೊಲದಲ್ಲೇ ಉಳಿದಿರುವ ಪ್ರಸಂಗಗಳು ಕಣ್ಣ ಮುಂದಿವೆ. ಇವೆಲ್ಲವನ್ನು ಸೂಕ್ಷö್ಮವಾಗಿ ಗಮನಿಸುವ ಕೆಲ ಕೃಷಿಕರು ಪರ್ಯಾಯ ಬೆಳೆಗಳತ್ತ ಯೋಚಿಸುತ್ತಾರೆ. ಅಂತಹವರ ಪೈಕಿ ಕಣಿವೆ ಗ್ರಾಮದ ಬಳಿಯ ಹಕ್ಕೆ ನಿವಾಸಿ ಚಂದ್ರಶೆಟ್ಟಿ ಎಂಬವರು ಚೆಂಡು ಹೂವು ಕೃಷಿ ಮಾಡಿ ಖುಷಿ ಕಾಣುತ್ತಿದ್ದಾರೆ.

ಮೂಲತಃ ಗಾರೆ ಕೆಲಸದ ಮೇಸ್ತಿçಯಾದ ಚಂದ್ರಶೆಟ್ಟಿ ಉಪ ಕಸುಬಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.

ಕಣಿವೆ ಗ್ರಾಮದ ಕರ್ನಲ್ (ನಿವೃತ್ತ) ನಾರಾಯಣ ಮೂರ್ತಿ ಎಂಬವರಿಗೆ ಸೇರಿದ ಎರಡು ಎಕರೆ ಭೂಮಿಯನ್ನು ಎಕರೆಗೆ ೨೫ ಸಾವಿರದಂತೆ ೫೦ ಸಾವಿರ ತೆತ್ತು ಲೀಸ್‌ಗೆ ಪಡೆದು ಚೆಂಡು ಹೂವು ಕೃಷಿ ಮಾಡಿದ್ದಾರೆ.

೧೦೦ ರಿಂದ ೧೨೦ ದಿನದೊಳಗೆ ಪೂರ್ಣ ಕಟಾವು ಮಾಡಬಹುದಾದ ಈ ಚೆಂಡು ಹೂವನ್ನು ಹಾಸನದ ಕಂಪೆನಿಯೊAದು ನೇರವಾಗಿ ಕೃಷಿಕನ ಭೂಮಿಯಲ್ಲಿ ಒಂದು ಕೆಜಿಗೆ ತಲಾ ೭ ರೂ.ಗಳಂತೆ ಕೊಟ್ಟು ಖರೀದಿಸಿ ಕೊಂಡೊಯ್ಯುತ್ತಾರೆ.

ಈ ಬಗ್ಗೆ ಚೆಂಡು ಹೂವು ಬೀಜವನ್ನು ಬಿತ್ತನೆ ಮಾಡುವಾಗಲೇ ಕಂಪೆನಿ ರೈತನ ಮನೆ ಬಾಗಿಲಿಗೆ ಬಂದು ಒಪ್ಪಂದ ಮಾಡಿಕೊಳ್ಳುತ್ತದೆ.

ಒಂದು ಎಕರೆ ಭೂಮಿಯಲ್ಲಿ ನೂರು ಗ್ರಾಂ ಹೂವಿನ ಬೀಜದಂತೆ ಅದಕ್ಕೆ ಬೇಕಾದ ರಸಗೊಬ್ಬರ ಹಾಗೂ ರಾಸಾಯನಿಕ ಔಷಧಿಯನ್ನು ಕಂಪೆನಿ ಆಯಾಯ ಕೃಷಿಕನಿಗೆ ಒದಗಿಸುತ್ತದೆ.

ಜಮೀನಿನಲ್ಲಿ ಐದು ಅಡಿ ಅಂತರದ ಸಾಲುಗಳಲ್ಲಿ ಗೇಣಿಗೊಂದರAತೆ ಈ ಚೆಂಡು ಹೂವನ್ನು ನೆಡುವ ರೈತ, ಅದರಲ್ಲಿ ಕಳೆ ಬರದಂತೆ ಎತ್ತುಗಳಿಂದ ನೇಗಿಲು ಬಿಟ್ಟು ಗುಣಿ ಕೆರೆದು ಕಳೆ ತೆಗೆಯುತ್ತಾನೆ. ಹಾಗೆಯೇ ಕೀಟಗಳ ಹತೋಟಿಗೆ ರಸಾಯನಿಕ ಸಿಂಪಡಿಸುವ ರೈತ, ಗಿಡಗಳ ಬುಡಕ್ಕೆ ಎರಡರಿಂದ ಮೂರು ಬಾರಿ ರಸಗೊಬ್ಬರ ಹಾಕಲಾಗುತ್ತದೆ. ಬಿತ್ತನೆಯ ಒಂದೂವರೆ ತಿಂಗಳಲ್ಲಿ ಮೊದಲ ಹೂವಿನ ಫಸಲು ಬರುತ್ತದೆ. ಬುಡದಿಂದ ಹಾಸಿದಂತೆ ಹಸಿರು ಬಣ್ಣದ ಕವಲೊಡೆದ ಪುಟ್ಟ ಪುಟ್ಟ ಕವಲುಗಳಲ್ಲಿ ಕೆಂಪನೆಯ ಹೂವನ್ನು ಬಿಟ್ಟಾಗ ಆ ಭೂಮಿಯನ್ನು ನೋಡುವುದೇ ಒಂದು ಆನಂದ.

ಬಿತ್ತನೆಯ ಒಂದೂವರೆ ತಿಂಗಳ ಮೊದಲ ಕುಯಿಲಲ್ಲಿ ಎರಡು ಎಕರೆ ಹೊಲದಲ್ಲಿ ಕನಿಷ್ಟ ೧೫ ಕ್ವಿಂಟಾಲ್ ಹೂ ಫಸಲಿನ ನಿರೀಕ್ಷೆ ಹೊಂದಿರುವ ಕೃಷಿಕ ಚಂದ್ರಶೆಟ್ಟಿ, ಮುಂದಿನ ಐದಾರು ಅವಧಿಯ ತನಕ ಅಂದರೆ ಪ್ರತೀ ವಾರ ವಾರವೂ ಈ ಹೂವಿನ ಫಸಲು ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಈ ಹೂವು ಕೃಷಿ ನಮಗೆ ಯಾವ ಕಾರಣಕ್ಕೂ ನಷ್ಟವೇ ಅಲ್ಲ. ಮೂರುವರೆ ನಾಲ್ಕು ತಿಂಗಳೊಳಗೆ ಕಟಾವು ಮಾಡಿ ಮತ್ತೆ ಇದೇ ಜಮೀನಿನಲ್ಲಿ ಮತ್ತೆ ಬೇರೆ ಬೆಳೆ ಬೆಳೆಯಬಹುದು ಎನ್ನುತ್ತಾರೆ.

ಹೂವಿನ ಬೆಳೆ ಅಂದ ಮೇಲೆ ಅಕ್ಕ ಪಕ್ಕದವರು ಬಂದು ನೋಡ್ತಾರೆ. ಮನೆಗೆ ದೇವರ ಪೂಜೆಗೆ ಬಾಗಿಲ ತೋರಣಕ್ಕೆ ಅಂತಾ ಹೂವು ಕೇಳುತ್ತಾರೆ. ಏನೇ ಆಗಲಿ ಬೆಳೆದ ಫಸಲಲ್ಲವೇ ಕೊಡ್ತೇನೆ. ಮತ್ತು ಬೆಲೆ ಸಿಗದ ಬೆಳೆಯನ್ನು ಬೆಳೆದು ಚಾತಕ ಪಕ್ಷಿಯಂತೆ ಕಾಯುವ ಬದಲು ಜಮೀನಿಗೆ ಬಂದು ಕೊಂಡೊಯ್ಯುವ ಈ ಹೂವಿನ ಕೃಷಿಯನ್ನು ಮಾಡಿದರೆ ಉತ್ತಮ ಎನ್ನುತ್ತಾರೆ ಚಂದ್ರಶೆಟ್ಟಿ ದಂಪತಿ.

ಕಡಿಮೆ ಖರ್ಚಿನಲ್ಲಿ ಒಂದಷ್ಟು ಹೆಚ್ಚೇ ಆದಾಯ ಕೊಡುವ ಈ ಹೂವಿನ ಫಸಲು ನಮ್ಮನ್ನು ಹೂವಾಗಿಸಿದೆ ಎನ್ನುತ್ತಾರೆ ಇವರು.

ಒಟ್ಟಾರೆ ಕೃಷಿಕ ಬೆಳೆವ ಯಾವುದೇ ತರಕಾರಿ, ಕಾಯಿ ಪಲ್ಯೆ, ಗೆಡ್ಡೆ- ಗೆಣಸು ಹಾಗೂ ವಾಣಿಜ್ಯ ಬೆಳೆಗಳನ್ನು ರೈತನ ಹೊಲಕ್ಕೆ ಬಂದು ನಿಗದಿತ ದರದಲ್ಲಿಯೇ ಖರೀದಿಸುವಂತಹ ವ್ಯವಸ್ಥೆ ಈ ಚೆಂಡು ಹೂವಿನ ರೀತಿ ಜಾರಿಯಾದರೆ ಬೆಳೆದವರ ಮನ ಹೂವು ಅರಳುವ ರೀತಿ ಅರಳುತ್ತದೆ ಅಲ್ಲವೇ.

- ಕೆ.ಎಸ್. ಮೂರ್ತಿ