ಮಡಿಕೇರಿ, ಜೂ. ೨೪: ನಗರದಲ್ಲಿ ಪಾರ್ಸಲ್ ಸೇವೆ ನೀಡುತ್ತಿರುವ ಹೊಟೇಲ್‌ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುತ್ತಿಲ್ಲ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಸ್ಥಳೀಯರು ವಾಟ್ಸಪ್ ಮೂಲಕ ದೂರು ನೀಡಿದ ಹಿನ್ನೆಲೆ ಜಿಲ್ಲಾಧಿಕಾರಿ, ಆಹಾರ ಸುರಕ್ಷತಾ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದರು.ನಗರದ ವಿವಿಧ ಹೊಟೇಲ್‌ಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕೊಡಗು-ಹಾಸನ ವಿಭಾಗದ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಅನಿಲ್ ಧವನ್ ಹಾಗೂ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ದಿಢೀರ್ ದಾಳಿ ನಡೆಸಿ ಎಚ್ಚರಿಕೆ ನೀಡಿದರು.

ಹೊಟೇಲ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಈ ಹಿನ್ನೆಲೆ ಹೊಟೇಲ್ ಮಾಲೀಕರಿಗೆ ನೋಟೀಸ್ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೋಟೀಸ್ ಪ್ರತಿಯನ್ನು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

(ಮೊದಲ ಪುಟದಿಂದ) ಈ ಬಗ್ಗೆ ಮಾತನಾಡಿದ ಅಧಿಕಾರಿ ಅನಿಲ್ ಧವನ್, ಶುಚಿತ್ವ ಇಲ್ಲದ ಹೊಟೇಲ್ ಮಾಲೀಕರಿಗೆ ನೋಟೀಸ್ ನೀಡಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಡಾ.ಮೋಹನ್ ಮಾತನಾಡಿ, ಬೆಳಿಗ್ಗೆ ೬.೩೦ಕ್ಕೆ ಉಸ್ತುವಾರಿ ಸಚಿವರು ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದರು. ಈ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಹೇಳಿದರು.

ಹೊಟೇಲ್ ಜಪ್ತಿ

ಮಡಿಕೇರಿ ನಗರದ ಹೊಟೇಲ್ ಪಿಶ್‌ಲ್ಯಾಂಡ್‌ನಲ್ಲಿ ಶಿಷ್ಟಾಚಾರ ಪಾಲನೆ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರಸಭಾ ಅಧಿಕಾರಿಗಳು ಹೊಟೇಲ್‌ನ್ನು ಜಪ್ತಿ ಮಾಡಿದ್ದಾರೆ.