ಬೆಂಗಳೂರು, ಜೂ. ೨೪: ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸೋದ್ಯಮ ವಲಯಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಆಸ್ತಿತೆರಿಗೆ, ವಿದ್ಯುತ್ ಶುಲ್ಕ ಹಾಗೂ ಅಬಕಾರಿ ಶುಲ್ಕದಲ್ಲಿ ಹಲವಾರು ರಿಯಾಯಿತಿಗಳನ್ನು ನೀಡಿ ಆದೇಶ ಹೊರಡಿಸಿದೆ.
ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಪ್ರಸಕ್ತ ಸಾಲಿನಲ್ಲಿ (೨೦೨೧ - ೨೦೨೨) ಶೇಕಡ ೫೦ರಷ್ಟು ಆಸ್ತಿ ತೆರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಹೊಟೇಲ್, ರೆಸಾರ್ಟ್ ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ ಪ್ರಸಕ್ತ ಸಾಲಿನ (ಮೊದಲ ಪುಟದಿಂದ) ಏಪ್ರಿಲ್ ಮೇ ಜೂನ್ ತಿಂಗಳ ವಿದ್ಯುಚ್ಛಕ್ತಿ ಶುಲ್ಕ ಮನ್ನಾ ಮಾಡಲಾಗಿದೆ.
ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇಕಡಾ ೫೦ರಷ್ಟು ಮೊತ್ತವನ್ನು ಪಾವತಿಸುವುದು ಮತ್ತು ಉಳಿದ ಶೇಕಡಾ ೫೦ರಷ್ಟು ಮೊತ್ತವನ್ನು ಈ ವರ್ಷದ ಡಿಸೆಂಬರ್ ೩೧ರೊಳಗೆ ಪಾವತಿಸಲು ೬ ತಿಂಗಳ ಕಾಲಾವಧಿ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರತಿ ಪ್ರವಾಸಿ ಮಾರ್ಗದರ್ಶಿ ಗೆ ೫೦೦೦ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ತೀರ್ಮಾನ ಕೈಗೊಂಡಿದೆ.