ಸಿದ್ದಾಪುರ, ಜೂ. ೨೨: ಕಾಡಾನೆಯೊಂದು ಮನೆಯೊಳಗೆ ನುಗ್ಗಿ ಮನೆಯೊಳಗೆ ಮಲಗಿದ್ದ ಮನೆಯೊಡತಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಬಸವನಹಳ್ಳಿ ಹಾಡಿಯ ನಿವಾಸಿ ಚಂದ್ರ ಹಾಗೂ ರಾಜಮ್ಮ ದಂಪತಿ ರಾತ್ರಿ ನಿದ್ರಿಸುತ್ತಿದ್ದ ಸಂದರ್ಭ ತಡರಾತ್ರಿ ಅಂದಾಜು ೨ ಗಂಟೆಯ ಸಮಯಕ್ಕೆ ಕಾಡಾನೆಯೊಂದು ತನ್ನ ಮರಿಯೊಂದಿಗೆ ಏಕಾಏಕಿ ಚಂದ್ರ ಅವರ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದೆ. ಅಲ್ಲದೇ ಮಂಚದಲ್ಲಿ ಮಲಗಿದ್ದ ರಾಜಮ್ಮ ಅವರನ್ನು ಸೊಂಡಿಲಿನಿAದ ಎಳೆದು ಹಾಕಿದೆ ಎನ್ನಲಾಗಿದೆ. ಈ ಶಬ್ದವನ್ನು ಕೇಳಿ ರಾಜಮ್ಮ ಅವರ ಪತಿ ಚಂದ್ರ ಬೊಬ್ಬೆ ಹಾಕಿದಾಗ ಕಾಡಾನೆಯು ಚಂದ್ರ ಅವರ ಮೇಲೆ ದಾಳಿ ನಡೆಸಲು ಮುಂದಾಗಿದ್ದು ನಿದ್ರೆಯ ಮಂಪರಿನ ನಡುವೆ ಎದ್ದುಬಿದ್ದು ಓಡಿ ದಾಳಿಯಿಂದ ಪಾರಾಗಿದ್ದಾರೆ.

ಕಾಡಾನೆ ದಾಳಿಗೆ ಸಿಲುಕಿದ ರಾಜಮ್ಮ ಅವರ ಬಲಕೈಗೆ ಗಾಯವಾಗಿದ್ದು, ಅದೃಷ್ಟವಶಾತ್ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿ ಚಂದ್ರ ಅವರ ಮನೆಯ ಹಿಂಭಾಗದ ಶೌಚಾಲಯ ಕೂಡ ಧ್ವಂಸವಾಗಿದೆ. ಇದಲ್ಲದೇ ನೆರೆ ಮನೆಯ ನಿವಾಸಿಯಾಗಿರುವ ತಮ್ಮಣ್ಣ ಎಂಬವರ ಶೌಚಾಲಯಕ್ಕೂ ಹಾನಿಯಾಗಿದೆ.

ಚಂದ್ರ ದಂಪತಿಯ ಮನೆಗೆ ಕಾಡಾನೆ ದಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ಹಾಡಿಯ ನಿವಾಸಿ ಮಹೇಶ್ ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಬಸವನಹಳ್ಳಿ ಹಾಡಿ ಯಲ್ಲಿ ೮ಕ್ಕೂ ಅಧಿಕ ಮನೆಗಳ ಮೇಲೆ ಕಾಡಾನೆಗಳು ದಾಳಿ ನಡೆಸಿ ಹಾನಿ ಗೊಳಿಸಿದ್ದವು. ಈ ಹಿನ್ನೆಲೆ ಕಾಡಾನೆ ದಾಳಿ ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕೆಂದು ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಇದೀಗ ಮತ್ತೆ ಆನೆ ದಾಳಿಯಿಂದಾಗಿ ಹಾಡಿಯ ನಿವಾಸಿ ಗಳು ಭಯಭೀತರಾಗಿದ್ದಾರೆ. - ವಾಸು