ಸೋಮವಾರಪೇಟೆ, ಜೂ.೨೨: ರಾಷ್ಟಿçÃಯ ಆರೋಗ್ಯ ಮಿಷನ್ ಯೋಜನೆಯಡಿ ಸೋಮವಾರಪೇಟೆ ಯಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮ ವಹಿಸುವುದಾಗಿ ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದ ಸಂಸದರು, ಗುಡ್ಡಗಾಡು ಪ್ರದೇಶವಾಗಿರುವ ಸೋಮವಾರಪೇಟೆಗೆ ತಾಯಿ-ಮಗು ಆಸ್ಪತ್ರೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಿಂದ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರದಲ್ಲೇ ಯೋಜನೆಗೆ ಅನುದಾನ ಒದಗಿಸುವುದಾಗಿ ತಿಳಿಸಿದರು.

ಇದರೊಂದಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ರೂ. ೯೪ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೆಲ್ಫ್ ಆಕ್ಸಿಜನ್ ಜನರೇಟ್ ಯೂನಿಟ್ ಕಾಮಗಾರಿಯನ್ನು ಪರಿಶೀಲಿಸಿದ ಅವÀರು, ಶೀಘ್ರದಲ್ಲೇ ಯೋಜನೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ೧೨೦೦ ಆಕ್ಸಿಜನ್ ಜನರೇಟ್ ಯೂನಿಟ್ ಸ್ಥಾಪಿಸುತ್ತಿದ್ದು, ಕೊಡಗಿನಲ್ಲೂ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ನಡುವೆ ವೈದ್ಯರು ಹಾಗೂ ವಸತಿಗೃಹಗಳ ಕೊರತೆಯೂ ಕಾಡುತ್ತಿದೆ. ಸದ್ಯಕ್ಕೆ ಹೊಸದಾಗಿ ಆಗಮಿಸಿರುವ ವೈದ್ಯರುಗಳಿಗೆ ನಿರೀಕ್ಷಣಾ ಮಂದಿರದಲ್ಲಿ ಉಳಿಯಲು ಅವಕಾಶ ಮಾಡಿಕೊಡಬೇಕಿದೆ ಎಂದರು.

೩ನೇ ಅಲೆಯ ಒಳಗೆ ವೈದ್ಯರ ವಸತಿ ಸಮಸ್ಯೆಯನ್ನು ನೀಗಿಸಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕಿದೆ. ಕೊರೊನಾ ಬಂದ ನಂತರವೇ ಆರೋಗ್ಯ ಕ್ಷೇತದಲ್ಲಿ ಆಗಬೇಕಿರುವ ಸುಧಾರಣೆ ಹಾಗೂ ವೈದ್ಯಕೀಯ ಸವಾಲುಗಳ ಬಗ್ಗೆ ತಿಳಿದುಬರುತ್ತಿದೆ. ಕೇಂದ್ರ ಸರ್ಕಾರದ ಎನ್.ಹೆಚ್.ಎಂ.ನಿAದ ಆರೋಗ್ಯ ಸೇವೆಗೆ ನೀಡುತ್ತಿರುವ ಅನುದಾನವನ್ನು ಇನ್ನಷ್ಟು ಹೆಚ್ಚು ಮಾಡುವುದಾಗಿ ಭರವಸೆ ನೀಡಿದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಷಿಯನ್ ಲಭ್ಯರಿದ್ದು, ಐಸಿಯು ಘಟಕ ಹಾಗೂ ವೆಂಟಿಲೇಟರ್‌ಗಳ ಕೊರತೆಯಿದೆ ಎಂದು ಸಂಸದರ ಗಮನ ಸೆಳೆದ ಸಂದರ್ಭ, ವೆಂಟಿಲೇಟರ್‌ಗಳನ್ನು ನೀಡಲು ಸಾಕಷ್ಟು ದಾನಿಗಳು ಮುಂದೆ ಬಂದಿದ್ದಾರೆ. ಇದರೊಂದಿಗೆ ಸರ್ಕಾರದ ವತಿಯಿಂದಲೂ ವೆಂಟಿಲೇಟರ್ ನೀಡಲಾಗುವುದು. ಸೋಮವಾರಪೇಟೆಗೆ ಅವಶ್ಯವಿರುವ ವೆಂಟಿಲೇಟರ್‌ಗಳ ವರದಿ ನೀಡಿದರೆ ತಕ್ಷಣ ಒದಗಿಸಲಾಗುವುದು ಎಂದರು.

ಕಳೆದ ಮಾರ್ಚ್ನಿಂದ ಈವರೆಗೆ ಕೊಡಗಿನಲ್ಲಿ ೩೮೦೦ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದ್ದು, ಎಲ್ಲರೂ ಚೇತರಿಸಿ ಕೊಂಡಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದು, ನಿನ್ನೆ ದಿನ ಜಿಲ್ಲೆಗೆ ೧೦ ಸಾವಿರ ಡೋಸ್ ಬಂದಿದೆ. ಈಗಾಗಲೇ ೧೯ ಸಾವಿರ ಡೋಸ್ ದಾಸ್ತಾನಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ತಿಳಿಸಿದರು.

ಲಸಿಕೆ ಕೊರತೆಯಾಗದಂತೆ ನಿಗಾ ವಹಿಸಬೇಕು. ಲಸಿಕೆಗಳನ್ನು ದಾಸ್ತಾನಿರಿಸದೇ ಸಾಧ್ಯವಾದಷ್ಟು ಹೆಚ್ಚಿನ ಮಂದಿಗೆ ಲಸಿಕೆ ನೀಡಬೇಕು. ನಿರೀಕ್ಷಿತ ಗುರಿ ಸಾಧಿಸಬೇಕು ಎಂದು ಪ್ರತಾಪ್ ಸಿಂಹ ನಿರ್ದೇಶನ ನೀಡಿದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರವೀಂದ್ರ, ವೈದ್ಯರುಗಳಾದ ಸತೀಶ್‌ಕುಮಾರ್, ಶಿವಪ್ರಸಾದ್, ಶುಶ್ರೂತ್‌ರಾಜ್, ಕಿರಣ್ ಅವರುಗಳು ಉಪಸ್ಥಿತರಿದ್ದು, ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಗಮನ ಸೆಳೆದರು.