ಕೂಡಿಗೆ, ಜೂ. ೨೧: ಕಳೆದ ೧೨ ವರ್ಷಗಳ ಹಿಂದೆ ಹೆಬ್ಬಾಲೆಯಿಂದ ಗುಮ್ಮನಕೊಲ್ಲಿ ಮತ್ತು ಶಿರಂಗಾಲ ಗ್ರಾಮದವರೆಗಿನ ೧೨ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಕೈಗೊಳ್ಳಲಾಗಿತ್ತು. ಆದರೆ ಇದುವರೆಗೂ ಗುಮ್ಮನಕೊಲ್ಲಿ ಗ್ರಾಮದವರೆಗೆ ವಿವಿಧ ಕಾರಣದಿಂದಾಗಿ ನೀರು ಮಾತ್ರ ತಲುಪಿಲ್ಲ, ಇದೀಗ ಹೊಸ ಪೈಪ್‌ಲೈನ್ ಅಳವಡಿಸುವ ಮೂಲಕ ನೀರು ತಲುಪಿಸಲು ಇಲಾಖೆ ಮತ್ತು ಗುತ್ತಿಗೆದಾರ ಮುಂದಾಗಿದ್ದಾರೆ.

ಕಳೆದ ೧೨ ವರ್ಷಗಳ ಹಿಂದೆ ಮಾಡಿದ ಪೈಪ್ ಅಳವಡಿಕೆಯು ಸಮರ್ಪಕವಾಗದೆ ಮತ್ತು ಶಿರಂಗಾಲದಿAದ ಕುಶಾಲನಗರದವರೆಗೆ ರಾಜ್ಯ ಹೆದ್ದಾರಿ ರಸ್ತೆಯ ಕಾಮಗಾರಿ ಮಾಡುವ ಸಂದರ್ಭದಲ್ಲಿ ಅನೇಕ ಪೈಪ್‌ಗಳು ಹಾನಿಗೊಳಗಾಗಿದ್ದರಿಂದ ಹೆಬ್ಬಾಲೆಯಿಂದ ಶುದ್ಧೀಕರಣಗೊಂಡ ನೀರು ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ತಲುಪುತ್ತಿರಲಿಲ್ಲ. ಕೇಂದ್ರ ಸರಕಾರದ ಜಲಜೀವನ್ ಯೋಜನೆಯ ಅಡಿಯಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಪ್ರಗತಿಯಲ್ಲಿದ್ದು, ಅದರೊಂದಿಗೆ ನೀರು ಸರಬರಾಜಾಗಲು ಬೇಕಾಗುವ ಬೃಹತ್ ಗಾತ್ರದ ಪೈಪ್‌ಗಳನ್ನು ಅಳವಡಿಸುವ ಕಾರ್ಯ ಈಗ ಭರದಿಂದ ಸಾಗುತ್ತಿದೆ.

ಈ ಸಾಲಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷವಾದ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಇಂಜಿನಿಯರ್ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.