ನಾಪೋಕ್ಲು, ಜೂ. ೧೬: ಫಸಲು ಭೀಮಾ ವಿಮಾ ಯೋಜನೆಯಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಸಂಸ್ಥೆ ಆದೇಶ ಹೊರಡಿಸಿದೆ. ಆದರೆ, ಈ ಯೋಜನೆಯ ಬಗ್ಗೆ ರೈತರಿಗೆ ಸಂಪೂರ್ಣವಾದ ಮಾಹಿತಿ ಇಲ್ಲದ ಹಿನ್ನಲೆಯಲ್ಲಿ ಸಂಸ್ಥೆಯ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ಸೇವ್ ಕೊಡಗು ಸಂಘಟನೆಯ ಪದಾಧಿಕಾರಿಗಳಾದ ಬಿದ್ದಾಟಂಡ ಜಿನ್ನು ನಾಣಯ್ಯ, ಎನ್.ಎಸ್.ಉದಯಶಂಕರ್, ಪಟ್ರಪಂಡ ಮೋಹನ್ ಮುದ್ದಪ್ಪ, ಕೇಟೋಳಿರ ರೆಮ್ಮಿ, ನಿಡುಮಂಡ ಕೃತಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು, ಜಿಲ್ಲೆಯ ಕೆಲವು ಬೆಳೆಗಾರರ ಆರ್.ಟಿ.ಸಿಯಲ್ಲಿ ಮಾತ್ರ ಕರಿಮೆಣಸು ಬೆಲೆ ನಮೂದಾಗಿದೆ. ಅಡಿಕೆ ಬೆಳೆಯನ್ನು ನಮೂದಿಸಲಾಗಿಲ್ಲ. ಆರ್.ಟಿ.ಸಿಯಲ್ಲಿ ಬೆಳೆ ನಮೂದಾಗದಿರುವ ರೈತರು, ಬೆಳೆಗಾರರು ಹೇಗೆ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಳು ಮೆಣಸು ಬೆಳೆಗಾರರು ಒಂದು ಹೆಕ್ಟೇರ್‌ಗೆ ೨೪೦೦ ರೂ. ಪಾವತಿಸಬೇಕು ಎಂದು ಸಂಸ್ಥೆ ತಿಳಿಸಿದೆ. ಆದರೆ, ಅಂತರ ಬೆಳೆಯಾಗಿ ಬೆಳೆಯಲಾಗಿರುವ ಕಾಳು ಮೆಣಸು ಬೆಳೆಯನ್ನು ಒಂದು ಏಕರೆ ಪ್ರದೇಶಕ್ಕೆ ೧೫ ಸೆಂಟು ಎಂದು ಪರಿಗಣಿಸಲಾಗುತ್ತದೆ. ಅದರನ್ವಯ ಒಂದು ಹೆಕ್ಟೇರ್ ಕಾಫಿ ತೋಟದಲ್ಲಿ ೩೭.೫೦ ಸೆಂಟು ಮಾತ್ರ ಕಾಳುಮೆಣಸು ಬೆಳೆಯಾಗಿರುತ್ತದೆ. ಇದಕ್ಕೆ ಯಾವ ಮಾನದಂಡದAತೆ ವಿಮಾ ಕಂತು ಪಾವತಿಸಬೇಕೆಂಬ ಬಗ್ಗೆ ರೈತರಿಗೆ, ಬೆಳೆಗಾರರಿಗೆ ಗೊಂದಲ ಉಂಟಾಗಿದೆ ಎಂದು ತಿಳಿಸಿದ್ದಾರೆ. ಅಡಿಕೆ ಬೆಳೆಗಾರರು ವಿಮೆ ಮಾಡಿಸಬೇಕಾದರೆ ಅಡಿಕೆ ಬೆಳೆ ನಮೂದಾಗಿರುವ ಆರ್.ಟಿ.ಸಿ ನೀಡಬೇಕು. ಕಂದಾಯ ಇಲಾಖೆ ಈ ಕಾರ್ಯವನ್ನು ಕೈಗೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮೂಲ ಬೆಳೆಯಾಗಿದೆ. ಆದರೆ, ಕೊಡಗಿನಲ್ಲಿ ಇದನ್ನು ಹೆಚ್ಚಾಗಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಗಾರರು ಯಾವ ರೀತಿ ವಿಮಾ ಯೋಜನೆಯ ಲಾಭ ಪಡೆಯಲು ಸಾಧ್ಯ. ದಕ್ಷಿಣ ಕನ್ನಡ ಜಿಲ್ಲೆಗೂ ಕೊಡಗು ಜಿಲ್ಲೆಗೂ ಒಂದೇ ರೀತಿಯ ಮಾನದಂಡ ಸರಿಯೇ ಎನ್ನುವದು ಅಡಿಕೆ ಬೆಳೆಗಾರರ ಪ್ರಶ್ನೆಯಾಗಿದೆ. ಒಂದೆಡೆ ಕೊರೊನಾ ಅಟ್ಟಹಾಸ, ಮತ್ತೊಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಪವಾಹ ಭೀತಿ. ಇದರ ನಡುವೆ ನಾಪೋಕ್ಲುವಿನಿಂದ ಮಡಿಕೇರಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರೊಂದಿಗೆ ವಿಮೆ ಹಣ ಪಾವತಿಸಲು ಜೂ. ೩೦ರ ವರೆಗೆ ಅವಕಾಶ ನೀಡಲಾಗಿದೆ. ಈ ಕಾಲಾವಧಿಯನ್ನು ಜು. ೧೫ರ ವರೆಗೆ ಮುಂದೂಡುವದರೊAದಿಗೆ ವಿಮಾ ಹಣ ಪಾವತಿಸುವ ಸ್ಥಳ, ಪಾವತಿಸಲು ಬೇಕಾದ ದಾಖಲಾತಿಗಳು, ಮೊತ್ತ ಸೇರಿದಂತೆ ಇದಕ್ಕೆ ಸಂಬAಧಿಸಿದ ಸಂಪೂರ್ಣ ಮಾಹಿತಿಯನ್ನು ಜಿಲ್ಲೆಯ ರೈತರಿಗೆ, ಬೆಳೆಗಾರರಿಗೆ ಸಂಸ್ಥೆಯ ಅಧಿಕಾರಿಗಳು ನೀಡಬೇಕೆಂದು ಅವರು ‘ಶಕ್ತಿ’ಯ ಮೂಲಕ ಒತ್ತಾಯಿಸಿದ್ದಾರೆ.