*ಗೋಣಿಕೊಪ್ಪ, ಜೂ. ೧೬: ಹಾಡಿ ನಿವಾಸಿಗಳಿಗೆ ಪಡಿತರ ವಿತರಣೆಯಲ್ಲಿ ತಿತಿಮತಿ ಲ್ಯಾಂಪ್ ಸೊಸೈಟಿ ಅಧೀನದಲ್ಲಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಬಡಜನರಿಗೆ ವಂಚನೆ ಮಾಡುತ್ತಿದ್ದು, ಫಲಾನುಭವಿಗಳ ಪಡಿತರ ಅಕ್ಕಿಯನ್ನು ಅಧಿಕ ಬೆಲೆಗೆ ಮಾರಾಟವಾಗುತ್ತಿದೆ ಎಂದು ತಿತಿಮತಿ ಗ್ರಾ.ಪಂ. ಸದಸ್ಯ ಶಂಕರ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಶಂಕರ್ ಅವರು, ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಾಡಿ ನಿವಾಸಿಗಳು ಸುಮಾರು ೪೫೦ಕ್ಕೂ ಹೆಚ್ಚು ಪಡಿತರ ಚೀಟಿಯನ್ನು ಹೊಂದಿದ್ದು, ಲ್ಯಾಂಪ್ ಸೊಸೈಟಿಯ ಆಶ್ರಯ ಹೊಂದಿದ್ದಾರೆ. ಆದರೆ ನ್ಯಾಯ ಬೆಲೆ ಅಂಗಡಿಯಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ. ಹಾಡಿಗಳಿಂದ ಕೂಲಿ ಕೆಲಸಗಳನ್ನು ಬಿಟ್ಟು ಪಡಿತರ ಪಡೆಯಲು ಬಂದಾಗ ನ್ಯಾಯ ಬೆಲೆ ಅಂಗಡಿ ಮುಚ್ಚಿರುತ್ತದೆ. ಇದರಿಂದ ಪಡಿತರ ಹೊಂದಿಕೊಳ್ಳಲು ಹಾಡಿ ನಿವಾಸಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ನೀಡುವ ಅಕ್ಕಿ ಇನ್ನಿತರ ವಸ್ತುಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ವಿತರಿಸದೇ ನ್ಯಾಯ ಬೆಲೆ ಅಂಗಡಿಯ ನಿರ್ವಾಹಕ ಕಳ್ಳಸಾಗಾಣಿಕೆಯ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗಿರಿಜನರಿಗೆ ಸಿಗಬೇಕಾದ ಪಡಿತರ ವಸ್ತುಗಳಲ್ಲಿ ವಂಚನೆಯಾಗುತ್ತಿದೆ. ಓರ್ವ ಫಲಾನುಭವಿಗೆ ಸರ್ಕಾರ ೧೦ ಕೆ.ಜಿ. ಅಕ್ಕಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ, ತಿತಿಮತಿ ನ್ಯಾಯಬೆಲೆ ಅಂಗಡಿಯ ನಿರ್ವಾಹಕ ಫಲಾನುಭವಿಗೆ ೫ ಕೆ.ಜಿ ಅಕ್ಕಿಯನ್ನು ನೀಡಿ ಉಳಿದ ಅಕ್ಕಿಯನ್ನು ಮುಂದಿನ ತಿಂಗಳು ನೀಡುತ್ತೇವೆ ಎಂದು ಹೇಳಿ ಫಲಾನುಭವಿಯನ್ನು ಸಾಗುಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಮುಂದಿನ ತಿಂಗಳಿನಲ್ಲಿ ಫಲಾನುಭವಿ ಬಂದು ಕಳೆದ ತಿಂಗಳ ಅಕ್ಕಿಯನ್ನು ನೀಡಿ ಎಂದಾಗ ಸರ್ವರ್ ಸಮಸ್ಯೆ ಇದೆ. ಅಕ್ಕಿ ವಿತರಣೆಯಾಗಿಲ್ಲ ಎಂದು ನುಣುಚಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದಾರೆ. -ಎನ್.ಎನ್. ದಿನೇಶ್